ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ
ಜಮೀನು ವಿವಾದಕ್ಕೆ ಒಂದೇ ಕುಟುಂಬದ ಆರು ಜನರ ಬರ್ಬರ ಹತ್ಯೆ
ಚಡಚಣ: ವಿಜಯಪುರ ಜಿಲ್ಲೆಯ ಭೀಮಾತೀರ ಭಾಗ ಮತ್ತೊಮ್ಮೆ ರಕ್ತಪಾತದ ಘಟನೆಗೆ ಸಾಕ್ಷಿಯಾಗಿದ್ದು, ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಶುಕ್ರವಾರ (ಮೇ 29) ನಡೆದ ಭೀಕರ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಜಮೀನು ವಿವಾದದ ಹಿನ್ನೆಲೆ ಒಂದೇ ಕುಟುಂಬದ ಆರು ಜನರನ್ನು ಗುಂಡಿಕ್ಕಿ ಹಾಗೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗೋವಿಂದಪುರ ಗ್ರಾಮದ ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಜಮೀನು ವಿಚಾರವಾಗಿ ವೈಮನಸ್ಸು ನಡೆದು ಬರುತ್ತಿತ್ತು ಎನ್ನಲಾಗಿದ್ದು, ಇದೇ ದ್ವೇಷ ಕೊನೆಗೆ ರಕ್ತಪಾತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ಹತ್ಯೆಯಲ್ಲಿ ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಹಾಗೂ ತೋಟದ ಮನೆಯಲ್ಲಿದ್ದ ಶಬ್ಬೀರ್ ನದಾಫ್ ಸೇರಿದಂತೆ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಹಂತಕರು ಮೊದಲು ಗನ್ನಿಂದ ಫೈರಿಂಗ್ ನಡೆಸಿ ಬಳಿಕ ಮಚ್ಚುಗಳಿಂದ ಹಿಗ್ಗಾಮುಗ್ಗಾ ದಾಳಿ ನಡೆಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಶಾಂತವಾಗಿದ್ದ ಭೀಮಾತೀರ ಪ್ರದೇಶದಲ್ಲಿ ಮತ್ತೆ ಹಳೆಯ ವೈಷಮ್ಯದ ರಕ್ತಚರಿತ್ರೆ ಮರುಕಳಿಸಿದಂತಾಗಿದ್ದು, ಘಟನೆ ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ತೋಟದ ಮನೆಯಲ್ಲಿದ್ದ ಕುಟುಂಬದವರ ಮೇಲೆ ಏಕಾಏಕಿ ದಾಳಿ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಹುಕಾಲದ ಬಳಿಕ ಭೀಮಾತೀರದಲ್ಲಿ ನಡೆದಿರುವ ಈ ಭೀಕರ ಸರಣಿ ಹತ್ಯೆ ವಿಜಯಪುರ ಜಿಲ್ಲೆಯ ಜನರಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಸಿದೆ.