ವಿಜಯಪುರ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನಾ ವೃತ್ತಿ ಮತ್ತು ಸಂಶೋಧನಾ ಅವಕಾಶಗಳಿಗೆ ನೆಟ್/ಕೆಸೆಟ್ ಪರೀಕ್ಷೆಗಳು ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದ ನೆಟ್/ಕೆಸೆಟ್ ಪರೀಕ್ಷೆಗಳ ಮಹತ್ವ ಮತ್ತು ಅವುಗಳನ್ನು ಎದುರಿಸುವ ವಿಧಾನಗಳು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲು ನೆಟ್/ಕೆಸೆಟ್ ಪರೀಕ್ಷೆಗಳ ಕುರಿತು ಸ್ಪಷ್ಟ ಅರಿವು ಮತ್ತು ಸಮರ್ಪಕ ಸಿದ್ಧತೆ ಹೊಂದುವುದು ಅಗತ್ಯ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ, ಕಲಬುರಗಿಯ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸಮೀನಾ ಸಿಂದಗೀಕರ್ ಮಾತನಾಡಿ, ಕ್ರಮಬದ್ಧ ಅಧ್ಯಯನ, ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ ಹಾಗೂ ಸಮಯ ನಿರ್ವಹಣೆಯ ಮೂಲಕ ನೆಟ್/ಕೆಸೆಟ್ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಎಂ.ಪಿ. ಬಳಿಗಾರ ವಹಿಸಿದ್ದರು
ಕಾರ್ಯಕ್ರಮದದಲ್ಲಿ ಸಮಾಜಶಾಸ್ತ್ರ ವಿಭಾಗದ ಎಂ.ಎ. ಪದವಿಯಲ್ಲಿ ಐದು ಚಿನ್ನದ ಪದಕಗಳನ್ನು ಪಡೆದ ಹಾಗೂ ಇತ್ತೀಚೆಗೆ ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿನಿ ಕು. ಸಬಾ ಕುಡಚಿ ಅವರನ್ನು ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಮತ್ತು ಪ್ರೊ. ಎಂ.ಪಿ. ಬಳಿಗಾರ ಅವರು ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಡಾ. ರಶ್ಮಿ ಗು. ವಂಶಾಕೃತಮಠ ಕಾರ್ಯಕ್ರಮ ನಿರೂಪಿಸಿದರು. ಡಾ.ಇಂದಿರಾಗಾAಧಿ ಕೊಂಡಗೂಳಿಕರ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿ ನೀತು ಪರಿಚಯಿಸಿದರು. ಸುಧಾ ವಂದಿಸಿದರು.