ಮಿರಗಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ: ತಾಯಿ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ
ಇಂಡಿ: ತಾಲೂಕಿನ ಮಿರಗಿ ಗ್ರಾಮದಲ್ಲಿ ಮನಕಲಕುವ ದುರ್ಘಟನೆ ನಡೆದಿದ್ದು, ತಾಯಿ ತನ್ನ ಮೂವರು ಮಕ್ಕಳೊಂದಿಗೆ ನೀರಿನಿಂದ ತುಂಬಿದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಕುಟುಂಬದೊಳಗಿನ ಜಗಳಗಳು ಹಾಗೂ ದಿನನಿತ್ಯದ ಆರ್ಥಿಕ ಸಂಕಷ್ಟಗಳಿಂದ ಬೇಸತ್ತು ತಾಯಿ ಈ ಕಠಿಣ ನಿರ್ಧಾರಕ್ಕೆ ಮುಂದಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ರಾತ್ರಿ ಸಮಯದಲ್ಲಿ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಮನೆಯ ಸಮೀಪದ ಬಾವಿಯ ಬಳಿಗೆ ಹೋಗಿ ಬಾವಿಗೆ ಹಾರಿದರೆಂದು ತಿಳಿದುಬಂದಿದೆ.
ಘಟನೆ ತಿಳಿದ ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಹಾಗೂ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಬಾವಿಯಿಂದ ನಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಈ ದುರ್ಘಟನೆ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ನಿಖರ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಮಿರಗಿ ಗ್ರಾಮದಲ್ಲಿ ತೀವ್ರ ದುಃಖದ ವಾತಾವರಣವನ್ನು ಉಂಟುಮಾಡಿದೆ.