ವಿಜಯಪುರ: ಕಾಖಂಡಕಿ ಮತ್ತು ಸುತ್ತಮುತ್ತಲಿನ ತಾಣಗಳು ಐತಿಹಾಸಿಕ ಹಿನ್ನೆಲೆಯ ಪುಣ್ಯಭೂಮಿಗಳಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಅಗತ್ಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಶ್ರೀ ಹಣಮಂತ ದೇವರ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾಖಂಡಕಿ ಮಹಿಪತಿದಾಸರ ಪುಣ್ಯಭೂಮಿ. ಪಕ್ಕದಲ್ಲಿರುವ ಹರಳಯ್ಯನ ಗುಂಡ ಕೂಡ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ತಾಣಗಳ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಶ್ರೀ ಹಣಮಂತ ದೇವರ ನೂತನ ದೇಗುಲ ನಿರ್ಮಾಣಕ್ಕೆ ಈಗಾಗಲೇ ರೂ. 50 ಲಕ್ಷ ವೈಯಕ್ತಿಕ ದೇಣಿಗೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಉಳಿದ ರೂ 50 ಲಕ್ಷ ನೆರವು ನೀಡಲಾಗುವುದು. ಒಟ್ಟಾರೆಯಾಗಿ ರೂ. 1 ಕೋಟಿ ದೇಣಿಗೆಯನ್ನು ಈ ಪವಿತ್ರ ಕಾರ್ಯಕ್ಕೆ ಸಮರ್ಪಿಸುತ್ತಿರುವುದು ತೃಪ್ತಿ ತಂದಿದೆ. ಭಕ್ತಿ, ಶ್ರದ್ಧೆ,ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿರುವ ಈ ಪವಿತ್ರ ದೇವಾಲಯದ ನಿರ್ಮಾಣ ಕಾಮಗಾರಿಯು ಗುಣಮಟ್ಟದಿಂದ, ಶೀಘ್ರವಾಗಿ ಪೂರ್ಣಗೊಂಡು ಭಕ್ತಾದಿಗಳ ಸೇವೆಗೆ ಸಮರ್ಪಣೆಯಾಗಲಿ. ಶ್ರೀ ಹಣಮಂತ ದೇವರ ಕೃಪಾಕಟಾಕ್ಷ ಸರ್ವರ ಮೇಲಿರಲೆಂದು ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು, ಜಿಲ್ಲಾದ್ಯಂತ ನಾನಾ ದೇವಸ್ಥಾನಗಳ ಹಾಗೂ ಧಾರ್ಮಿಕ ಭವನಗಳ ನಿರ್ಮಾಣಕ್ಕೆ ಸರಕಾರದಿಂದ ಹಾಗೂ ವೈಯಕ್ತಿಕವಾಗಿ ನೀಡಲಾದ ಕೊಡುಗೆಗಳನ್ನು ಸ್ಮರಿಸಿದರು.
ಈ ಭಾಗವನ್ನು ನೀರಾವರಿ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಂಡ ಪರಿಣಾಮ ಇಲ್ಲಿ ಈಗ ಹೊಳೆಸಾಲಿನ ಗ್ರಾಮಗಳ ವಾತಾವರಣ ಉಂಟಾಗಿದೆ. ಇಲ್ಲಿನ ರೈತರು ಸಮೃದ್ಧರಾಗಿದ್ದಾರೆ. ಸ್ವಾವಲಂಬಿಗಳಾಗಿದ್ದಾರೆ. ಇಲ್ಲಿನ ರೈತರು ಪ್ರತಿ ಎಕರೆಗೆ ಲಕ್ಷ ರೂ. ಆದಾಯಗಳಿಸುವಂತಾಗಿದೆ. ಅನ್ನದಾತರ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಹಿಂದುಳಿದ ಹಣೆಪಟ್ಟಿ ಹೋಗಿ ಈಗ ಎಲ್ಲರೂ ಬೇರೆ ಯಾವುದಕ್ಕೂ ಸಮಯವಿಲ್ಲದೆ ದುಡಿಯುತ್ತಿದ್ದಾರೆ. ಸಿಎಸ್ಆರ್ ಯೋಜನೆಯಡಿ ಗ್ರಾಮದ ಸರಕಾರಿ ಶಾಲೆಗಳ ಕೋಣೆ ನಿರ್ಮಾಣ ಸೇರಿ ಮಕ್ಕಳಿಗೆ ಗುಣಮಟ್ಟದ ಆಟಿಕೆಗಳನ್ನು ನೀಡುವ ಕೆಲಸ ನಡೆದಿದೆ. ಇಲ್ಲಿ ಕೆಪಿಎಸ್ ಶಾಲೆ ಕೂಡ ಮಂಜೂರು ಮಾಡಲಾಗಿದೆ. ಅಕ್ಷಯ ಕಲ್ಪ, ಕೃಷಿ ಕಲ್ಪ ಯೋಜನೆ ಮೂಲಕ ಕ್ಷೀರ ಕ್ರಾಂತಿಗೂ ಯೋಜನೆ ಇದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಗ್ರಾಮದ ಶಿವಯೋಗಿ ಸ್ವಾಮೀಜಿ ಹಾಗೂ ಯೋಗೇಶ್ವರಿ ಅಮ್ಮನವರು ಮಾತನಾಡಿ, ಸಚಿವರ ಸಮಗ್ರ ಅಭಿವೃದ್ಧಿಯ ಕಾರ್ಯ ಹಾಗೂ ಜನಪರ ನಿಲುವನ್ನು ಶ್ಲಾಘಿಸಿದರು.
ಇದೇ ವೇಳೆ ಸಚಿವರು ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳು, ಹಿಮಾಲಯದಿಂದ ಆಗಮಿಸಿದ್ದ ಶ್ರೀ ಸ್ವಾಮಿ ಹರಿಓಂ ಆನಂದ ಭಾರತಿ ಸ್ವಾಮಿಜೀ, ಶ್ರೀ ಶುಭಮುನಿ ರಮೇಶ ಸ್ವಾಮಿಜೀ, ಶ್ರೀ ಸ್ವಾಮಿ ಶಕ್ತಿಜೀ ಹಾಗೂ ಶ್ರೀ ಸ್ವಾಮಿ ಗುಣಾನಂದ ಸರಸ್ವತಿ ಸ್ವಾಮಿಜಿ ಅವರಿಗೆ ಗುರುವಂದನೆ ಸಲ್ಲಿಸಿ, ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶ್ರೀ ನಿಜಲಿಂಗಯ್ಯ ಶಾಸ್ತ್ರಿ, ಮುಖಂಡರಾದ ನಿಂಗನಗೌಡ ಪಾಟೀಲ, ಉಮೇಶ ವಂದಾಲ, ರಾಜೇಂದ್ರಗೌಡ ಪಾಟೀಲ, ವಿ. ಎಸ್. ಪಾಟೀಲ, ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ವಿಠ್ಠಲ ಬಾಬಾನಗರ, ವಿಜಯಕುಮಾರ ಮೈಲಾರ, ಬಾಬುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹಾದೇವ ತಳವಾರ, ವಿದ್ಯಾರಾಣಿ ತುಂಗಳ, ಭುವನೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಪರಮಹಂಸ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಧಾರವಾಡಮಠ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು.
Bài viết hay, mình học được nhiều điều. Letco là địa chỉ du học Hàn Quốc đáng tin cậy, hỗ trợ toàn diện từ tiếng Hàn đến visa. Xem tại letco.vn.