ಇಂಡಿ: ದಿನಾಂಕ 24/01/2026 ರಂದು ಇಂಡಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಹೆಣ್ಣು ಮಗುವಿನ ಮಹತ್ವ, ಆರೋಗ್ಯ ಹಾಗೂ ಪೋಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹೆಣ್ಣು ಮಗುವಿನ ತಾಯಂದಿರಿಗೆ ಹಣ್ಣು–ಹಂಪಲುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರಾಜೇಶ್ ಕೋಳೆಕರ, ಹೆಣ್ಣು ಮಗುವಿನ ಆರೋಗ್ಯ ರಕ್ಷಣೆ, ಪೌಷ್ಟಿಕ ಆಹಾರ ಮತ್ತು ಸಮಯಕ್ಕೆ ಸರಿಯಾದ ಲಸಿಕೆಗಳ ಅಗತ್ಯತೆಯನ್ನು ವಿವರಿಸಿದರು. ಜೊತೆಗೆ ಸಮಾಜದಲ್ಲಿ ಹೆಣ್ಣು ಮಗುವಿಗೆ ಸಮಾನ ಹಕ್ಕು, ಗೌರವ ಹಾಗೂ ಶಿಕ್ಷಣ ದೊರೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಆರ್. ಎಸ್. ಇಂಗಳೆ, ಚರ್ಮರೋಗ ತಜ್ಞರಾದ ಡಾ. ಸಂತೋಷ ಪವಾರ, ಹಿರಿಯ ವೈದ್ಯಾಧಿಕಾರಿಗಳಾದ ಡಾ. ಪ್ರೀತಿ ಕೋಳೆಕರ, ಚಿಕ್ಕ ಮಕ್ಕಳ ತಜ್ಞರಾದ ಡಾ. ವಿಪೂಲ ಕೋಳೆಕರ, ನೇತ್ರ ತಜ್ಞರಾದ ಡಾ. ಜಗದೀಶ ಬಿರಾದಾರ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಹೆಣ್ಣು ಮಗುವಿನ ಸಂರಕ್ಷಣೆ, ಪೋಷಣೆ ಹಾಗೂ ಆರೋಗ್ಯ ಸೇವೆಗಳ ಮಹತ್ವದ ಕುರಿತು ಮಾಹಿತಿ ನೀಡಲಾಗಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಯಶಸ್ಸು ತಂದರು.