ಡಾ.ಭೀಮಣ್ಣ ಖಂಡ್ರೆ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ
ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತಾಪ ಸಂದೇಶ ನೀಡಿರುವ ಸಚಿವ ಶಿವಾನಂದ ಪಾಟೀಲ ಅವರು, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾತ್ರವಲ್ಲದೇ ಹೈದರಾಬಾದ್ ವಿಮೋಚನೆ ಗೊಳಿಸಿ ಒಕ್ಕೂಟ ಭಾರತದಲ್ಲಿ ಸೇರಿಸಲು ಟೊಂಕ ಕಟ್ಟಿದ್ದ ಡಾ.ಭೀಮಣ್ಣ ಖಂಡ್ರೆ ಅವರು ಕರ್ನಾಟಕ ಏಕೀಕರಣಕ್ಕೂ ಶ್ರಮಿಸಿದ್ದರು ಎಂದು ಸ್ಮರಿಸಿದ್ದಾರೆ.
ಕರ್ನಾಟಕ ರಾಜಕೀಯ ರಂಗದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿದ್ದ ಭೀಮಣ್ಣ ಖಂಡ್ರೆ ಅವರು, ಮೇಲ್ಮನೆ, ಕೆಳಮನೆ ಸದಸ್ಯರಾಗಿ ಸಚಿವರಾಗಿ ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೇತೃತ್ವ ವಹಿಸಿ, ಸಮುದಾಯದ ಸಂಘಟನೆಗೂ ಶ್ರಮಿಸಿದ್ದರು. ಇಂಥ ಮಹಾನ್ ನಾಯಕನ ಅಗಲಿಕೆಯಿಂದ ಕರುನಾಡು ಬಡವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಗವಂತ ಮೃತರ ಆತ್ಮಕ್ಕೆ ಶಾಂತಿಕರುಣಿಸಲಿ, ಖಂಡ್ರೆ ಕುಟುಂಬಕ್ಕೆ ಹಿರಿಯನ ಅಗಲಿಕೆಯ ನೋವು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
1 thought on “ಡಾ.ಭೀಮಣ್ಣ ಖಂಡ್ರೆ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ”