ಇಂಡಿ ನಗರದ ಸರಕಾರಿ ಉರ್ದು ಗಂಡು ಮಕ್ಕಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿಜ್ಞಾನ ಪ್ರದರ್ಶನವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಯಿದಾ ಅನೀಸ್ ಮುಜಾವಾರ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ಮಕ್ಕಳು ಪ್ರದರ್ಶನದಲ್ಲಿ ತೋರಿದ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ನೋಡಿ ನನಗೆ ತುಂಬಾ ಸಂತೋಷವಾಗಿದೆ. ಎಲ್ಲ ಶಿಕ್ಷಕರಿಗೂ ನನ್ನ ವಿನಂತಿ ಏನೆಂದರೆ, ಮಕ್ಕಳಿಗೆ ಉತ್ತಮ ತರಬೇತಿ ನೀಡಿ, ಅವರೊಳಗಿನ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಮುಂದುವರಿಸಬೇಕು.
ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವಿಜ್ಞಾನ ವಸ್ತು ಪ್ರದರ್ಶನದಂತಹ ವೇದಿಕೆ ಕಲ್ಪಿಸುವುದು ಮುಖ್ಯ ಎಂದು ಹೇಳಿದರು. ಮಕ್ಕಳಿಗೆ ರಚನಾತ್ಮಕ ಮತ್ತು ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಪರಿಪೂರಕವಾಗಿದೆ ಎಂದು ಹೇಳಿದರು.
ಅದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಅಲ್ಲಾಹಬಕ್ಷ ವಾಲೀಕರ ಮಾತನಾಡಿ, “ನಮ್ಮ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ತಮ್ಮ ಕರ್ತವ್ಯವೆಂದು ಭಾವಿಸಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಮನೆಮನೆಗೆ ತೆರಳಿ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸಬೇಕು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದರೆ, ಯಾರೂ ಸಹ ‘ಹೆಚ್ಚುವರಿ’ ಎಂಬ ಹೆಸರಿನಲ್ಲಿ ಶಿಕ್ಷಕರನ್ನು ಶಾಲೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ” ಎಂದು ಹೇಳಿದರು.
ಇನ್ನೂ ಅವರು ಮಾತನಾಡಿ, “ನಾನು ನನ್ನ ಸ್ವಂತ ಹಣದಿಂದ ನಮ್ಮ ಶಾಲೆಯಲ್ಲಿ ಪ್ರವೇಶ ಪಡೆದ ಪ್ರತಿಯೊಬ್ಬ ಮಗುವಿಗೂ ಸಾವಿರ ರೂಪಾಯಿ ಎಫ್ಡಿ (ಸ್ಥಿರ ಠೇವಣಿ) ಮಾಡಿಸುತ್ತಿದ್ದೇನೆ. ಎಲ್ಲಾ ಶಿಕ್ಷಕರು ತಮ್ಮ ತಮ್ಮ ಆಲೋಚನೆಗಳ ಪ್ರಕಾರ, ವಿಭಿನ್ನ ವಿಧಾನಗಳಲ್ಲಿ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಪ್ರಯತ್ನಿಸಬೇಕು” ಎಂದು ತಿಳಿಸಿದರು.
ವಿಶ್ರಾಂತ ಪ್ರಾಚಾರ್ಯ ಬಾಬುಸಾಬ್ ಸೌದಾಗರ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ತಮ್ಮ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಮಾದರಿಗಳ ತಯಾರಿಕೆಗೆ ಪ್ರೋತ್ಸಾಹ ನೀಡುವುದರಿಂದ ಅವರಲ್ಲಿ ಜ್ಞಾನಾಭಿವೃದ್ಧಿಗೆ ಹೆಚ್ಚು ಪ್ರೇರಣೆ ಸಿಗಲಿದೆ ಎಂದು ತಿಳಿಸಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ,’ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ ಹಾಗೂ ಮಕ್ಕಳ ಸುಪ್ತ ಪ್ರತಿಭೆ ಅರಳುತ್ತದೆ. ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ’ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ಜಾವೀದ ಮೊಮಿನ್, ಹುಮಾಯೂನ್ ಬೀಳವಾರ, ಮುಜೀಬ್ ಬಾಗವಾನ, ಕಾನಿಪ ಜಿಲ್ಲಾ ಕಾರ್ಯದರ್ಶಿ ಸದ್ದಾಂಹುಸೇನ್ ಜಮಾದಾರ, ಇಂಡಿ ತಾಲೂಕಾ ಕಾನಿಪ ಪ್ರಧಾನ ಕಾರ್ಯದರ್ಶಿ ರಾಜು ಚಾಬುಕಸವಾರ, ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಾಂಡು ರಾಠೋಡ, ಇಂಡಿ ಉರ್ದು ಕ್ಲಸ್ಟರ್ ಸಿ ಆರ್ ಪಿ ಪರ್ವೇಜ್ ಪಟೇಲ್, ಸಮಾಜ ಸೇವಕ ಹಸನ ಮುಜಾವರ, ಮುಖ್ಯ ಶಿಕ್ಷಕ ಯಾಸೀನ್ ತುರ್ಕಿ, ಶಿಕ್ಷಕರ ಸಂಘದ ನಿರ್ದೇಶಕ ಉಮರ ಶೇಖ್, ಶಾಕೀರ್ ನಾಗೂರ, ಎಸ್ ಎಸ್ ಅರಬ, ಎ ಎ ಇಂಡೀಕರ, ಎನ್ ಎಸ್ ದೇವರ, ಖಲಿಲ ಇಂಡಿಕರ, ಗೌರಮ್ಮ ನಿಡಗುಂದಿ, ಅತಿಥಿ ಶಿಕ್ಷಕ ರಾದ ಜಾಸ್ಮಿನ್ ಅರಬ, ಅಫ್ತಾಬ್ ತುರ್ಕಿ, ಮಿಶ್ಬಾ ನಾಗಠಾಣ, ರುಬಿನಾ ಮಕಾನದಾರ, ಮಿಶ್ಬಾ ಇಂಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.