ಸಾಧನೆಗೆ ಛಲ, ಕಠಿಣ ಪರಿಶ್ರಮ, ಸಹನೆ ಅತ್ಯಗತ್ಯ- ಪ್ರವೀಣ ಅಂಕಲಗಿ
ಇಂಡಿ: ಸಾಧನೆಗೆ ಕೇವಲ ಬುದ್ಧಿವಂತಿಕೆ ಸಾಕಾಗುವುದಿಲ್ಲ, ಗೆದ್ದೇ ತೀರುತ್ತೇನೆಂಬ ದೃಢವಾದ ಛಲ, ಅಪಾರ ಕಠಿಣ ಪರಿಶ್ರಮ ಮತ್ತು ಸಹನೆ ಅತ್ಯಗತ್ಯ ಎಂದು ಐ ಇ ಎಸ್ ಪರೀಕ್ಷೆಯ ಸಾಧಕ ಪ್ರವೀಣ ಅಂಕಲಗಿ ಹೇಳಿದರು.
ಬುಧವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇವಲ ಕನಸು ಕಂಡರೆ ಸಾಲದು, ಅದನ್ನು ನನಸಾಗಿಸಲು ಅವಿರತವಾಗಿ ಶ್ರಮಿಸಬೇಕು. ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಸೋಲುಗಳನ್ನು ಮೆಟ್ಟಿ ನಿಂತು, ಕಲಿಕೆಯನ್ನು ಮುಂದುವರಿಸುವದೇ ಯಶಸ್ಸಿನ ಕೀಲಿಕೈ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಆನಂದ ಹುಣಸಗಿ ಮಾತನಾಡಿ,
ದೇಶಕ್ಕೆ ಐ ಇ ಎಸ್ ಪರೀಕ್ಷೆಯಲ್ಲಿ 99ನೇ ಸ್ಥಾನ ಪಡೆದು ಇಂಡಿ ತಾಲೂಕಿನ ಕೀರ್ತಿ ದೇಶಕ್ಕೆ ಹೆಚ್ಚಿಸಿದ ಶ್ರೇಯಸ್ಸು ಪ್ರವೀಣ ಅಂಕಲಗಿ ಅವರಿಗೆ ಸಲ್ಲುತ್ತದೆ. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವವನೇ ನಿಜವಾದ ಸಾಧಕ. ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಾಧನೆಗೆ ನೂರಾರು ಅವಕಾಶಗಳಿವೆ. ಸಾಮಾನ್ಯನ ಮಗ ಅಸಾಮಾನ್ಯ ಸಾಧನೆ ಮಾಡುತ್ತಾನೆ ಎಂಬುದಕ್ಕೆ ಪ್ರವೀಣ ಅಂಕಲಗಿ ಪ್ರತ್ಯಕ್ಷ ಉದಾಹರಣೆ. ಮಕ್ಕಳಲ್ಲಿ ಆತ್ಮಬಲ ತುಂಬಿ ಬೆಳೆಸಿದರೆ ಈ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಡಬಲ್ಲರು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಸಾಧನೆಗೆ ಪರಿಶ್ರಮ, ಸಂಕಲ್ಪ, ಸಹನೆ ಮುಖ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಹವ್ಯಾಸ, ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಕನಸುಗಳು ಎಷ್ಟು ಮುಖ್ಯವೋ, ಗುರಿಯೂ ಅಷ್ಟೇ ಮುಖ್ಯ ಎಂದು ಹೇಳಿದರು.
ತಾಂಬಾ ಸಿ ಆರ್ ಪಿ ಎಸ್ ಆರ್ ಚಾಳೇಕರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ದೇಶ ಹೆಮ್ಮೆ ಪಡುವ ಸಾಧನೆ ಮಾಡಬಲ್ಲರು. ಇದಕ್ಕೆ ಪ್ರವೀಣ ಅಂಕಲಗಿ ಅವರೇ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸಿ ಆರ್ ಪಿ ಗಳಾದ ಮಂಜುನಾಥ ತೇಲಿ, ಬಿ ಡಿ ಚಪ್ಪರಬಂದ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾಳಪ್ಪ ಪೂಜಾರಿ, ಸುದರ್ಶನ ಬೇನೂರ, ಅಲ್ಲಾಭಕ್ಷ ಮಕಾನದಾರ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ಎಸ್ ಬಿ ಕೋಳಿ, ಕೆ ಆಯ್ ಮಕಾನದಾರ, ತೆನಿಹಳ್ಳಿ ಉರ್ದು ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್ ಎಂ ಬಡಿಗೇರ, ಲಿಂಗದಳ್ಳಿ ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ, ಗ್ರಾಮದ ಜಟ್ಟು ಮರಡಿ, ಸೇರಿದಂತೆ ಮೂರು ಶಾಲೆಯ ಶಿಕ್ಷಕ ಸಿಬ್ಬಂದಿ, ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮೂರು ಶಾಲೆಯ ವತಿಯಿಂದ ಪ್ರವೀಣ ಅಂಕಲಗಿ ಅವರನ್ನು ಸನ್ಮಾನಿಸಲಾಯಿತು.