ರೇಡಿಯೋ ಗ್ರಾಮೀಣ ಜನರ ಜೀವನದ ಅವಿಭಾಜ್ಯ ಅಂಗ- ಸಂತೋಷ ಬಂಡೆ
ಇಂಡಿ: ರೇಡಿಯೋ ಅತ್ಯಂತ ಹಳೆಯ, ಪ್ರಭಾವಶಾಲಿ ಸಂವಹನ ಮಾಧ್ಯಮವಾಗಿದ್ದು, ಪ್ರಜಾಪ್ರಭುತ್ವದ ಧ್ವನಿಯಾಗಿ, ವಿಪತ್ತು ನಿರ್ವಹಣೆಯಲ್ಲಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಇಂದಿಗೂ ಅತ್ಯಗತ್ಯ ಸಾಧನವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ವಿಶ್ವ ರೇಡಿಯೋ ದಿನ’ ವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ರೇಡಿಯೋ ಅತ್ಯಂತ ಹಳೆಯ ಅಭಿವ್ಯಕ್ತಿ ಮಾಧ್ಯಮ.
ಸುದ್ದಿ, ಜ್ಞಾನ, ಮನರಂಜನೆ ಮತ್ತು ಶಿಕ್ಷಣವನ್ನು ವೇಗವಾಗಿ, ಕಡಿಮೆ ವೆಚ್ಚದಲ್ಲಿ ದೂರದ ಪ್ರದೇಶಗಳಿಗೆ, ಸ್ಥಳೀಯ ಭಾಷೆಗಳಲ್ಲಿ ತಲುಪಿಸುತ್ತ, ಸ್ಥಳೀಯ ಪ್ರತಿಭೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುತ್ತದೆ ಎಂದು ಹೇಳಿದರು.
ರೇಡಿಯೋ ಗ್ರಾಮೀಣ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು, ರೈತರ ಜೀವನಾಡಿಯಾಗಿದೆ. ಅದು ಅನೇಕ ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಅದು ಪ್ರತಿಯೊಬ್ಬರ ಜೀವನವನ್ನು ಸ್ಪರ್ಶಿಸಿ, ಪ್ರಪಂಚದ ಮೂಲೆ ಮೂಲೆಗಳಿಂದ ಜನರನ್ನು ಒಟ್ಟುಗೂಡಿಸುವ ವಿಶಿಷ್ಟ ಶಕ್ತಿ ಹೊಂದಿದೆ ಎಂದು ಹೇಳಿದರು.
ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಇಂಟರ್ನೆಟ್ ಇಲ್ಲದ ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳಿಗೂ ಮಾಹಿತಿ ತಲುಪಿಸುವ ಅತ್ಯಂತ ಸುಲಭ, ವಿಶ್ವಾಸಾರ್ಹ ಮಾಧ್ಯಮವೇ ರೇಡಿಯೋ. ಕೃಷಿ ಮಾಹಿತಿ, ಹವಾಮಾನ ಮುನ್ಸೂಚನೆ, ಸುದ್ದಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ತಕ್ಷಣವೇ ತಲುಪಿಸುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.