ಪೇಜಾವರ ಮಠದ ವಿದ್ಯಾರ್ಥಿ ನಿಲಯಕ್ಕೆ ರೂ.೨೫ ಲಕ್ಷ ಅನುದಾನ
ಶಾಸಕ ಬಸನಗೌಡ ಪಾಟೀಲರಿಂದ ಭೂಮಿ ಪೂಜೆ
ವಿಜಯಪುರ ನಗರದ ಪೇಜಾವರ ಮಠದ ಅಖಿಲ ಭಾರತ ಮಧ್ವ ಮಹಾಮಂಡಲ ವಿದ್ಯಾರ್ಥಿ ನಿಲಯಕ್ಕೆ ರೂ.೨೫ ಲಕ್ಷ ಅನುದಾನ ಮಂಜೂರಿ ಮಾಡಿದ ಹಿನ್ನೆಲೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಹಿಂದು ಸನಾತನ ಧರ್ಮ ಉಳಿಸಿ ಬೆಳೆಸುವಲ್ಲಿ ಉಡುಪಿ ಪೇಜಾವರ ಮಠದ ಸ್ವಾಮಿಗಳಾದ ಪ್ರಾತ:ಸ್ಮರಣೀಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಾತ್ರ ಬಹು ದೊಡ್ದದು ಎಂದು ವರ್ಣಿಸಿದರು. ಸದಾ ಪಾದರಸದಂತೆ ಪ್ರವಾಸ ಮಾಡುತ್ತಿದ್ದ ಅವರು ದೇಶದ ಉದ್ದಗಲಕ್ಕೂ ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಸಕ್ತ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಕೂಡ ಅದೆ ದಾರಿಯಲ್ಲಿ ಸಾಗುತ್ತಿರುವದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ಐದು ದಶಕಗಳ ಹಿಂದೆ ಹಿಂದುಳಿದ ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯ ತೆರೆದು ಬಡವರ ವಿದ್ಯಾಭ್ಯಾಸಕ್ಕೆ ಅನಕೂಲ ಕಲ್ಪಿಸಿಕೊಟ್ಟ ಅವರ ಕಾಯಕ ನಿಜವಾಗಿಯೂ ಪ್ರಶಂಶನೀಯ. ಇದೀಗ ನೂತನ ಕಟ್ಟಡ ನಿರ್ಮಿಸಿ ಆಧುನಿಕ ಸೌಲಭ್ಯಗಳ ಮೂಲಕ ವಿದ್ಯಾರ್ಜನೆಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಇನ್ನೂ ರೂ.೨೫ ಲಕ್ಷ ಅನುದಾನ ಜೊತೆಗೆ ನಮ್ಮ ಸಂಸ್ಥೆಯಿಂದ ರೂ.೨೧ ಲಕ್ಷ ದೇಣಿಗೆ ಕೊಡುವದಾಗಿ ಘೋಷಿಸಿದ ಬಸನಗೌಡರು ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದರು. ತಾವೂ ಕೂಡ ಬೇರೆ ದಾನಿಗಳಿಗೆ ಹೇಳಿ ದೇಣಿಗೆ ಕೊಡಿಸುವದಾಗಿ ಪ್ರಕಟಿಸುವ ಮೂಲಕ ತನಿ-ಮನ ಧನದಿಂದ ಸಹಕರಿಸುವ ಭರವಸೆ ನೀಡಿದರು.
ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ ಬಸನಗೌಡರಿಗೂ ಪೇಜಾವರ ಮಠಕ್ಕೂ ಅವಿನಾಭಾವ ಸಂಬಂಧ ಇದೆ . ಪ್ರಾತ:ಸ್ಮರಣೀಯ ಶ್ರೀ ವಿಶ್ವೇಶತೀರ್ಥ ಶ್ರೀಗಳ ೬೦ ನೇ ಪೀಠಾರೋಹಣ ಕಾರ್ಯಕ್ರಮ ವಿಜಯಪುರದಲ್ಲಿ ನಡೆದಾಗ ಸಮೀತಿಯ ಅಧ್ಯಕ್ಷರಾಗಿ ಬಸನಗೌಡರು ಕಾರ್ಯ ನಿರ್ವಹಿಸಿದ್ದರು. ಅಂದು ಕೂಡ ಶಾಸಕರಾಗಿದ್ದ ಬಸನಗೌಡರು ಶ್ರೀಗಳ ಮುಂದೆ ಕೃಷ್ಣ ಮಂದಿರ ಬೇಡಿಕೆ ಇಟ್ಟಿದ್ದರು. ಮುಂದೆ ಒಂದು ದಶಕದ ನಂತರ ಸಂಸದರಾದ ಬಸನಗೌಡರು ಶ್ರೀಕೃಷ್ಣ ಮಠದ ನಿರ್ಮಾಣಕ್ಕೆ ರೂ.೧೦ ಲಕ್ಷ ಅನುದಾನ ನೀಡುವ ಮೂಲಕ ಬೇಡಿಕೆ ಈಡೇರುವಂತೆ ಮಾಡಿದ್ದು ಅವರ ಶ್ರದ್ಧಾ ಭಕ್ತಿಯ ಪ್ರತೀಕ ಎಂದು ಹೇಳಿದರು.
ಈ ವರೆಗೂ ಪ್ರತಿ ಹಂತದಲ್ಲಿ ಶ್ರೀಮಠದ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿ ನಿಲಯಕ್ಕೆ ಅವರ ಸಹಾಯ ಸಹಕಾರ ಮುಂದುವರೆದಿದೆ. ಸಿದ್ಧೇಶ್ವರ ಸಂಸ್ಥೆಯ ಮೂಲಕ ಕಲ್ಯಾಣ ಮಂಟಪ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಆಸ್ಪತ್ರೆ ನಿರ್ಮಾಣ ಸಾರ್ವಜನಿಕ ದಾಸೋಹ ಹೀಗೆ ಅನೇಕ ಕಾರ್ಯಗಳ ಕೊಡುಗೆ ಬಸನಗೌಡರ ಆದರ್ಶ ಎತ್ತಿ ತೋರಿಸುತ್ತವೆ ಎಂದರು.
ಶ್ರೀ ಮಠದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಪ್ರಾಸ್ತಾವಿಕವಾಗಿ ಬಸನಗೌಡರ ಮತ್ತು ಪೇಜಾವರ ಮಠದ ಸಂಬಂಧಗಳ ಕುರಿತು ಮಾತನಾಡಿದರು. ಶ್ರೀಮಠಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಶ್ರೀಮಠದ ಗುರುಗಳ ಸಂಪೂರ್ಣ ಅನುಗ್ರಹ ಬಸನಗೌಡರ ಮೇಲಿದೆ ಎಂದರು. ಶ್ರೀಮಠದ ಪರವಾಗಿ ಬಸನಗೌಡರಿಗೆ ಫಲ ಪುಷ್ಪ ಮತ್ತು ಶ್ರೀಕೃಷ್ಣ ವಿಗ್ರಹ ನೀಡಿ ಗೌರವಿಸಲಾಯಿತು. ಇದೇ ಸಮಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಜಯಪುರ ಪ್ರತಿನಿಧಿ ಸತೀಶಚಂದ್ರ ಕುಲಕರ್ಣಿ ಮತ್ತು ವಿಜಯಪುರ ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಮತ್ತು ವಿಜಯಪುರ ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಶ್ರೀಮಠದ ಸದಸ್ಯರಾದ ಡಾ ಮಂಗಲಗಿ, ಡಾ.ಮಲಘಾಣ, ವ್ಹಿ ಸಿ ಕುಲಕರ್ಣಿ, ಮೋಹನ ಕೌತಾಳ, ಅಶೋಕರಾವ್, ವಿಕಾಸ ಪದಕಿ ವಿಜಯ್ ಜೋಶಿ ಮುಂತಾದವರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಪಂಡಿತ ವಾಸುದೇವ ಆಚಾರ್ಯ ಮತ್ತು ಸಮೀರ ಆಚಾರ್ಯ ಅವರಿಂದ ವೇದಘೋಷ ನಡೆಯಿತು. ಕೊನೆಯಲ್ಲಿ ವಿಕಾಸ ಪದಕಿ ವಂದಿಸಿದರು. ಗೋವಿಂದ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು.