ಇಂಡಿ: ಸರ್ಕಾರಿ ಆಸ್ಪತ್ರೆ ಬಡವರ ಆಶಾಕಿರಣ – ರೋಗಿಗಳಿಗೆ ಕಾಳಜಿಯೇ ನಿಜವಾದ ಪುಣ್ಯ: ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಬಹುತೇಕರು ಬಡ ಮತ್ತು ಮಧ್ಯಮ ವರ್ಗದವರಾಗಿದ್ದಾರೆ. ಇಂತಹ ರೋಗಿಗಳಿಗೆ ವೈದ್ಯರು ಹಾಗೂ ಸಿಬ್ಬಂದಿ ಕಾಳಜಿ, ಸಹಾನುಭೂತಿ ಮತ್ತು ಮಾನವೀಯತೆಯಿಂದ ಮಾತನಾಡಿ ಉತ್ತಮ ಚಿಕಿತ್ಸೆ ನೀಡಿ ಕಳುಹಿಸಿದರೆ ಅದೇ ನಿಜವಾದ ಪುಣ್ಯಕಾರ್ಯವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀನ ಅಲ್ಟ್ರಾಸೌಂಡ್ (ಸೊನೋಗ್ರಾಫಿ) ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಪ್ರತಿಯೊಂದು ಕುಟುಂಬದ ಆರೋಗ್ಯದಲ್ಲಿ ಸ್ಪಷ್ಟ ಸುಧಾರಣೆ ತರಬೇಕೆಂಬುದು ನಮ್ಮ ಗುರಿಯಾಗಿದೆ. ಜನಸಾಮಾನ್ಯರಿಗೆ ಗುಣಮಟ್ಟದ ಹಾಗೂ ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.
ಇಂಡಿ ತಾಲೂಕಿಗೆ ಈ ಅಲ್ಟ್ರಾಸೌಂಡ್ ಸೊನೋಗ್ರಾಫಿ ಯಂತ್ರ ಲಭ್ಯವಾಗಿರುವುದು ಜಿಲ್ಲೆಯಲ್ಲಿಯೇ ಮೊದಲನೆಯದಾಗಿದೆ. ಇದರಿಂದ ಗರ್ಭಿಣಿಯರು ಹಾಗೂ ಸಾಮಾನ್ಯ ರೋಗಿಗಳು ದುಬಾರಿ ಖಾಸಗಿ ಆಸ್ಪತ್ರೆಗಳತ್ತ ಹೋಗುವ ಅಗತ್ಯ ಕಡಿಮೆಯಾಗಲಿದೆ. ಸ್ಥಳೀಯವಾಗಿ ಉತ್ತಮ ಸ್ಕಾನಿಂಗ್ ಸೌಲಭ್ಯ ದೊರೆಯುವುದರಿಂದ ಜನರಿಗೆ ಸಮಯ ಮತ್ತು ಹಣದ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತಕುಮಾರ ಗುಣಾರಿ ಮಾತನಾಡಿ, ಐದು ತಿಂಗಳಿಗಿಂತ ಹೆಚ್ಚು ಅವಧಿಯ ಗರ್ಭಿಣಿಯರಿಗೆ ಹಾಗೂ ತೊಂದರೆ ಇರುವ ಗರ್ಭಿಣಿಯರಿಗೆ ಸ್ಕಾನಿಂಗ್ ಸೌಲಭ್ಯ ನೀಡಲಾಗುತ್ತದೆ. ಪ್ರಸ್ತುತ ವಾರಕ್ಕೆ ಒಂದು ದಿನ ಸ್ಕಾನಿಂಗ್ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಾರಕ್ಕೆ ಎರಡು–ಮೂರು ದಿನಗಳವರೆಗೆ ವಿಸ್ತರಿಸುವ ಯೋಜನೆ ಇದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜೇಶ ಕೋಳೆಕರ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಮಕೃಷ್ಣ ಇಂಗಳೆ, ವೈದ್ಯರಾದ ಡಾ. ಜಾನ್ ಕಟವಟೆ, ಡಾ. ಪ್ರೀತಿ ಕೋಳೆಕರ, ಡಾ. ಶೃತಿ ಕುಂಬಾರ, ಡಾ. ಮನೋಜ ಗಿಡಗಂಟಿ, ಡಾ. ವಿಪುಲ್ ಕೋಳೆಕರ, ಡಾ. ಅಮಿತ ಕೋಳೆಕರ, ಡಾ. ರವಿ ಭತಗುಣಕಿ, ಆರೋಗ್ಯ ಸಮಿತಿ ಸದಸ್ಯರಾದ ಸತೀಶ ಕುಂಬಾರ, ರಾಜು ಪತಂಗೆ, ವಿಕಾಸ ಸಿಂದಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.