ಗಾಂಧೀಜಿಯವರ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ-ಸಂತೋಷ ಬಂಡೆ
ಇಂಡಿ: ಮಹಾತ್ಮ ಗಾಂಧೀಜಿಯವರ ಬದುಕಿನ ಮೌಲ್ಯಗಳು ಮಕ್ಕಳಲ್ಲಿ ಶಿಸ್ತು, ಧೈರ್ಯ, ಕರುಣೆ ಮತ್ತು ಶ್ರಮದ ಮಹತ್ವವನ್ನು ಮೂಡಿಸಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಸಹಾಯ ಮಾಡುತ್ತವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡ ‘ರಾಷ್ಟ್ರೀಯ ಹುತಾತ್ಮರ ದಿನ’ ವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ನಮ್ಮನ್ನು ಸದಾ ಎಚ್ಚರಿಸುವ ಗಾಂಧೀಜಿಯವರ ಜೀವನ, ಅವರ ನಡೆ-ನುಡಿಗಳ ಬೆಳಕಿನಲ್ಲಿ ಸಮೃದ್ಧ, ಸಶಕ್ತ ಭಾರತ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯುತ್ತ, ಉನ್ನತ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಜತೆಗೆ ಇಂದಿನ ಮಕ್ಕಳು ಸರಳತೆಯ ಜೀವನ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ತಮ್ಮ ಬದುಕೇ ತಮ್ಮ ಸಂದೇಶ ಎಂದು ಪ್ರತಿ ಗಳಿಗೆಯನ್ನು ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ ಮಾತನಾಡಿ,
ಯಾವಾಗಲೂ ಸತ್ಯವನ್ನೇ ಹೇಳುವದು. ಪ್ರಾಮಾಣಿಕವಾಗಿ ನಡೆದುಕೊಳ್ಳುವುದು. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತಹ ಗಾಂಧೀಜಿಯವರ ಸರಳ ನಿಯಮಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹುತಾತ್ಮರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು.