ಹಿರೇರೂಗಿ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ
ಇಂಡಿ: ದೇಶದ ಅಭಿವೃದ್ಧಿ ಹಾಗೂ ಆರೋಗ್ಯವಂತ ಸಮಾಜದ ದೃಷ್ಟಿಯಿಂದ 1-19 ವರ್ಷದ ಮಕ್ಕಳು ಮತ್ತು ಹದಿಹರೆಯದವರಿಗೆ ಉತ್ತಮ ಆಹಾರ, ಅಗತ್ಯ ಔಷಧಿ ನೀಡಬೇಕು. ಅವರಲ್ಲಿನ ಅಪೌಷ್ಠಿಕತೆ, ರಕ್ತಹೀನತೆ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಆರೋಗ್ಯ ನಿರೀಕ್ಷಣಾ ಅಧಿಕಾರಿ ಬಿ ಎಸ್ ಬಿರಾದಾರ ಹೇಳಿದರು.
ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಫೆ.10ನೇ ದಿನವನ್ನು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಕ್ಕಳಿಗೆ ಜಂತುಹುಳು ನಾಶಕ ಆಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ’ ಎಂದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ,’ ಆರೋಗ್ಯವಂತ ಮಕ್ಕಳು ಸದೃಢ ದೇಶದ ಅಡಿಪಾಯ. ಆದ್ದರಿಂದ ಅವರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಪ್ರಮುಖವಾಗಿ ಜಂತುಹುಳು ಸೋಂಕಿನಿಂದ ಮಕ್ಕಳನ್ನು ರಕ್ಷಿಸಬೇಕಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,’ ಪ್ರತಿ ಮಗುವಿಗೆ ಜಂತುಹುಳು ನಿವಾರಕ ಅಲ್ಬೆಂಡಜೋಲ್ ಮಾತ್ರೆಯನ್ನು ಶುದ್ಧ ಕುಡಿಯುವ ನೀರಿನೊಂದಿಗೆ ಸೇವಿಸಲು ನೀಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ. ಪೌಷ್ಠಿಕಾಂಶ ಕೊರತೆಯನ್ನು ನೀಗಿಸಿ, ಏಕಾಗ್ರತೆ ಹೆಚ್ಚಿಸುತ್ತದೆ’ ಎಂದು ಹೇಳಿದರು.
ಸಮುದಾಯ ಆರೋಗ್ಯ ಅಧಿಕಾರಿ ಎಲ್ ಡಿ ಮೇತ್ರಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಎಸ್ ಎಸ್ ಹೊನ್ನಮೊರೆ, ಆಶಾ ಕಾರ್ಯಕರ್ತೆಯರಾದ ಸುಜಾತಾ ಚಾಂದಕವಟೆ, ಆಯ್ ಎಸ್ ಹಳ್ಳದಮನಿ, ಶಿಕ್ಷಕಿ ಎನ್ ಬಿ ಚೌಧರಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.