ರಸ್ತೆ ಸುರಕ್ಷತಾ ನಿಯಮ ತಿಳಿಯುವದು ಅಗತ್ಯ-ಸಂತೋಷ ಬಂಡೆ
ಇಂಡಿ: ಚಿಕ್ಕವರಿರುವಾಗಲೇ ರಸ್ತೆ ಸುರಕ್ಷತಾ ನಿಯಮಗಳನ್ನು ಅರಿಯುವ ಮೂಲಕ, ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ಸುರಕ್ಷಿತ ಅಭ್ಯಾಸಗಳನ್ನು ಅನುಪಾಲಿಸುತ್ತ, ಇತರರಿಗೆ ಮಾದರಿಯಾಗಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಯುಬಿಎಸ್ ಶಾಲೆಯಲ್ಲಿ ಸಂಭ್ರಮ ಶನಿವಾರ ಬ್ಯಾಗ್ ಲೆಸ್ ಡೇ ನಿಮಿತ್ತ ಹಮ್ಮಿಕೊಂಡ ರಸ್ತೆ ಸುರಕ್ಷತೆ ಕುರಿತು ಮಾಹಿತಿ ನೀಡುತ್ತಾ ಮಾತನಾಡಿದರು.
ಹೆಲ್ಮೆಟ್ ಧರಿಸುವದು, ಸಂಚರಿಸುವಾಗ ಮೊಬೈಲ್ ಬಳಸದಿರುವುದು, ಸಂಚಾರ ಸಂಕೇತಗಳನ್ನು ಪಾಲಿಸುವಂತಹ ಸರಳ ಅಭ್ಯಾಸಗಳು ಮಕ್ಕಳ ಮನಸ್ಸಿನಲ್ಲಿ ಜೀವನ ಪೂರ್ತಿ ಬೇರೂರುತ್ತವೆ. ಇದು ಅಪಘಾತಗಳ ಅಪಾಯ ಕಡಿಮೆ ಮಾಡಿ, ರಸ್ತೆ ಸುರಕ್ಷತೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ ಮಾತನಾಡಿ,
ಪ್ರತಿಯೊಬ್ಬರು 18 ವರ್ಷದ ನಂತರ ವಾಹನ ಚಾಲನೆ ಪರವಾನಿಗಿ ಪಡೆದು ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡಬೇಕು. ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿದರೆ, ವಾಹನದ ಮಾಲೀಕರು 25 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಬೇಡಿ. ರಸ್ತೆ ಸುರಕ್ಷತೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಪಾಲಕರಾದ ಬೇಗಂ ಮುಲ್ಲಾ, ಕಮಲವ್ವ ದಳವಾಯಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆಯ ಕುರಿತು ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.