ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತರ ಧಿಡೀರ ಭೇಟಿ
ಚಡಚಣ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ವಿಜಯಪುರದ ಲೋಕಾಯುಕ್ತ ಅಧಿಕಾರಿಗಳು ಧಿಡೀರ ಭೇಟಿ ನೀಡಿ, ವಿವಿಧ ಕಡತ ಹಾಗೂ ಎಲ್ಲ ವಿಭಾಗಗಳನ್ನು ಪರಶೀಲಿಸಿದರು.
ಆಸ್ಪತ್ರೆಯ ಎಕ್ಸರೇ, ಹೆರಿಗೆ ಕೋಣೆ, ಶಸ್ತ್ರ ಚಿಕಿತ್ಸೆ ಘಟಕ, ದಂತ ಹಾಗೂ ನೇತ್ರ ತಪಾಸಣೆ, ಲ್ಯಾಬರೋಟರಿ, ಡಯಾಲಿಸಿಸ್ ಕೋಣೆ ಹಾಗೂ ಇನ್ನಿತರ ವಿಭಾಗಗಳ ಎಲ್ಲ ಕೋಣೆಗಳ ಮೂಲೆ ಮೂಲೆಯನ್ನು ಜಾಲಾಡಿದರು.
ಇತ್ತೀಚಿಗೆ ಅಂದರೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರು ಪ್ರತಿಭಟನೆ ನಡೆಸಿ, ಪಟ್ಟಣದಲ್ಲಿ ಇರುವ ತಾಲೂಕಾ ಸಮುದಾಯ ಕೇಂದ್ರದಲ್ಲಿ ವೈದ್ಯರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಒಂದು ವೇಳೆ ಚಿಕಿತ್ಸೆ ನೀಡಿದರೂ ಔಷಧಿಗಳನ್ನು ಹೊರಗಿನಿಂದ ತರಬೇಕು ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ ಎಂದು ಆರೋಪಿಸಿ, ತಹಶಿಲದಾರ ಅವರಿಗೆ ಮನವಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಲೋಕಾಯುಕ್ತ ಭೇಟಿ ವೇಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲವು ಔಷಧಿಗಳು ಡೇಟ ಡಿಬಾರ ಆಗಿರುವುದು ಅವರ ಗಮನಕ್ಕೆ ಬಂದಿದ್ದು, ಇಂತಹ ಔಷಧಿಗಳನ್ನು ರೋಗಿಗಳಿಗೆ ನೀಡಿದರೇ ಹೇಗೆ ಎಂದು ಆಸ್ಪತ್ರೆಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಆಸ್ಪತ್ರೆಯಲ್ಲಿ ಟ್ಯೂಬಲೈಟ್ಗಳು ಜೋತು ಬಿದ್ದಿದ್ದು ಹಾಗೂ ಗೋಡೆ, ಮೇಲ್ಛಾವಣಿ ಬಿರುಕು ಬಿಟ್ಟಿರುವದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಇವುಗಳನ್ನು ಬೇಗನೆ ಸರಿಪಡಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಎಚ್ಚರಿಸಿದ ಅವರು ಆಸ್ಪತ್ರೆಯ ಕಟ್ಟಡದ ಮುಂಭಾಗದಲ್ಲಿ ಎಲೆ, ಗುಟಕಾ ತಿಂದು ಉಗಿಳಿದ್ದರಿಂದ ಆಸ್ಪತ್ರೆಯ ಆವರಣ ಶುಚಿಯಾಗಿರದೇ ಗಲೀಜಾಗಿರುವದನ್ನು ನೋಡಿ ಇನ್ನು ಮುಂದೆ ಆಸ್ಪತ್ರೆಯ ಆವರಣ ಹಾಗೂ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದರು.
ಭೇಟಿ ವೇಳೆ ಲೋಕಾಯುಕ್ತ ಅಧಿಕಾರಿ ಆನಂದ ಸೇರಿದಂತೆ ಸಿಬ್ಬಂದಿಗಳು ಇದ್ದರು.
ಮಾಧ್ಯಮದವರಿಗೆ ಯಾವುದೇ ಸರಿಯಾದ ಮಾಹಿತಿ ನೀಡದೇ ತೆರಳಿದ ಲೋಕಾಯುಕ್ತ ಅಧಿಕಾರಿಗಳು. ಮಾಧ್ಯಮದವರು ಲೋಕಾಯುಕ್ತ ಅಧಿಕಾರಿಗಳಿಗೆ ಭೇಟಿ ಉದ್ದೇಶ ಹಾಗೂ ಪರಿಶೀಲಿಸಿದ ದಾಖಲೆಗಳ ಕುರಿತು ವಿಚಾರಿಸಿದಾಗ ಅಧಿಕಾರಿಗಳು ಯಾವುದೇ ಸರಿಯಾದ ಮಾಹಿತಿ ನೀಡದೇ ಕೇವಲ ಮೇಲಾಧಿಕಾರಿಗಳ ಆದೇಶದ ಮೇಲೆ ಭೇಟಿ ನೀಡಿದ್ದೇವೆ ಎಂದು ಹಾರಿಕೆ ಉತ್ತರ ನೀಡಿ ಅಲ್ಲಿಂದ ತೆರಳಿದರು.
: ಸಮುದಾಯ ಆರೋಗ್ಯ ಕೇಂದ್ರದ ದಂತ ಕೋಣೆಯ ದಾಖಲಾತಿ ಹಾಗೂ ಉಪಕರಣಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿರುವುದು.
: ಔಷಧಿ ವಿತರಣಾ ವಿಭಾಗದಲ್ಲಿಯ ಔಷಧಿಗಳನ್ನು ಪರಿಶಿಲಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು.