ಇಂಡಿ: ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಧಮ್ಕಿ ಹಾಕಿರುವ ಅಕ್ಕಿ ಕಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಇಂಡಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇಂಡಿ ತಾಲೂಕಾ ಕಾನಿಪ ಪ್ರಧಾನ ಕಾರ್ಯದರ್ಶಿ ಹಾಗೂ ಹೂಸದಿಗಂತ ತಾಲೂಕಾ ವರದಿಗಾರರು ರಾಜಕುಮಾರ ಚಾಬುಕಸವಾರ, ಮಾತನಾಡಿ ರಾಜ್ಯಾಧ್ಯಂತ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಪತ್ರಕರ್ತರು ನಾಲ್ಕನೇ ಅಂಗ ಆದರೆ ಅವರ ರಕ್ಷಣೆಗೆ ಯಾರೂ ಇಲ್ಲದಂತಾಗಿದೆ. ಜೀವ ಪಣಕ್ಕಿಟ್ಟು ಸುದ್ದಿ ಮಾಡುವ ಪತ್ರಕರ್ತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಶಿವಶರಣ ಅವರ ಮನೆಗೆ ಹೋಗಿ ಭಯ ಹುಟ್ಟಿಸಲು ಪ್ರಯತ್ನಿಸಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದರು.
ವಿಶ್ಪವಾಣಿ ತಾಲೂಕಾ ವರದಿಗಾರರು ಶರಣಬಸಪ್ಪ ಕಾಂಬಳೆ ಮಾತನಾಡಿ ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂದು ಕರೆಯಲಾಗುತ್ತಿದೆ ಆದರೆ ವಿಜಯಪುರದಲ್ಲಿ ಆ ಅಂಗವನ್ನು ಕುಸಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಪತ್ರಕರ್ತರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಎಂದರು.
ಕನ್ನಡ ಪ್ರಭ ವರದಿಗಾರರು ಖಾಜಪ್ಪ ಸಿಂಗೆಗೂಳ ಮಾತನಾಡಿ ಜಿಲ್ಲಾಡಾಳಿತ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ಹೋಗಿರುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಅವರ ಮೇಲೆ ಸೂಕ್ತ ಕ್ರಮ ಆಗದಿದ್ದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಸದ್ದಾಂಹುಸೇನ ಜಮಾದಾರ ಮಾತನಾಡಿ ಜಿಲ್ಲೆಯ ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರು ಅಕ್ಕಿ ಕಳ್ಳತನದ ಕುರಿತು ಬರೆದ ವರದಿ ತಪ್ಪಾಗಿದ್ದರೆ ಪ್ರಕರಣ ದಾಖಲಿಸಲಿ ನಾವು ಅದನ್ನು ಸ್ವೀಕರಿಸಿ ಕಾನೂನು ಹೋರಾಟ ಮಾಡುತ್ತೇವೆ. ಆದರೆ ಪತ್ರಕರ್ತರ ಮನೆಗೆ ತೆರಳಿ ದಮ್ಕಿ ಹಾಕುವುದು, ಕುಟುಂಬದವರಲ್ಲಿ ಆತಂಕ ಉಂಟಾಗುವ ರೀತಿಯಲ್ಲಿ ವರ್ತನೆ ತೋರುವುದು, ಅಲ್ಲದೇ ಪತ್ರಕರ್ತರಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿರುವದು ಅತ್ಯಂತ ಖಂಡನೀಯ ಎಂದರು.
ಇಂಡಿ ತಾಲೂಕಾ ಕಾನಿಪ ಅಧ್ಯಕ್ಷ ಮಾತನಾಡಿ, ಪತ್ರಕರ್ತ ಪರಶುರಾಮ ಶಿವಶರಣ ಅವರ ಮೇಲೆ ಹಲ್ಲೆಗೆ ಯತ್ನಿಸುವ ಭಾಗವಾಗಿ ಅವರ ಮನೆಗೆ ತೆರಳಿ ಭಯಪಡಿಸಲು ಪ್ರಯತ್ನ ಮಾಡಿರುವವರನ್ನು ಸುಮ್ಮನೆ ಬಿಡಬಾರದು. ನಾವು ಸಮಾಜದ ಧ್ವನಿಯಾಗಿ, ಜನಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರು. ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ ಚಟುವಟಿಕೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವ ನಮ್ಮ ಧ್ವನಿಯನ್ನು ಹತ್ತಿಕ್ಕಲು ದುಷ್ಟಶಕ್ತಿಗಳ ಪ್ರಯತ್ನ ಆಗಾಗ ನಡೆಯುತ್ತಲೇ ಇರುವುದು ಖಂಡನೀಯ. ಸರ್ಕಾರ ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅಕ್ಕಿ ಮಾಫಿಯಾಗಳು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸುವ ಯತ್ನ ಮಾಡಿದ್ದಾರೆ. ಅಲ್ಲದೇ ಜಾತಿ ನಿಂದನೆಯನ್ನು ಸಹಿತ ಮಾಡಿರುವುದನ್ನು ಜಿಲ್ಲಾಡಳಿತ ಹಗುರವಾಗಿ ಪರಿಗಣಿಸದೆ ಸೂಕ್ತ ಕ್ರಮ ಜರುಗಿಸಬೇಕು. ಅಕ್ಕಿ ಮಾಫಿಯಾಗಳಿಗೆ ಅಧಿಕಾರಿಗಳೂ ಸಹಿತ ಸಾತ್ ನೀಡುತ್ತಿರುವ ಮಾಹಿತಿಯೂ ಇದೆ. ಜಿಲ್ಲಾಡಳಿತ ಅಕ್ಕಿ ಕಳ್ಳರನ್ನು ಈಗಾಗಲೇ ಬಂಧಿಸಿದೆ. ಎಲ್ಲ ಅಕ್ಕಿ ಕಳ್ಳರಿಗೂ ಜಿಲ್ಲಾಡಳಿತ ಒಂದು ಸಂದೇಶ ರವಾನೆ ಮಾಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಸಹಿತ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.
ಪ್ರವಿನ ಮಠ್, ಜಹಾಂಗೀರ ದೇಸಾಯಿ, ಹಸನ ಮುಜಾವರ, ಮುಜೀಬ ಅಫಜಲಪೂರ, ಇರಶಾದ ಬೋರಾಮಣಿ, ಸಿದ್ದಯ್ಯ ಹೀರೆಮಠ್, ರಾಗವೇಂದ್ರ ಹೊನಮೋರೆ, ಬೀರಪ್ಪಾ ಸಂಗೊಗಿ, ಸೇರಿದಂತೆ ಅನೇಕರು ಇದ್ದರು.