ರಾಜೀನಾಮೆ ಹಿಂಪಡೆದ ಶಾಸಕ: “ಪಕ್ಷದ ಮೇಲೆ ಕೋಪವಿಲ್ಲ, ಆದರೆ ಭರವಸೆ ಈಡೇರಿಸದ್ದಕ್ಕೆ ನೋವಾಗಿತ್ತು”
ಇಂಡಿ: ನಗರದ ಶಾಸಕರೊಬ್ಬರು ತಾವು ಈ ಹಿಂದೆ ಸಲ್ಲಿಸಿದ್ದ ರಾಜೀನಾಮೆಯನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಇಂಡಿ ತಾಲೂಕಿನ ಪರವಾಸಿ ಮಂದಿರದಲ್ಲಿ ತಮ್ಮ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಸೇರಿಸಿ ಈ ಮಹತ್ವದ ಘೋಷಣೆ ಮಾಡಿದ ಅವರು, ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿದರು.
“ನಾನು ಯಾವಾಗಲೂ ಕಾಂಗ್ರೆಸ್ ಪಕ್ಷವನ್ನೇ ನನ್ನ ಪಕ್ಷವೆಂದು ಭಾವಿಸಿ ಕೆಲಸ ಮಾಡಿದ್ದೇನೆ. 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ, ಪಕ್ಷದ ನಾಯಕರು ನನಗೆ ಜೋತೆಗೆ ಮಾತನಾಡಿ ಎರಡುವರೆ ವರ್ಷಗಳ ನಂತರ ನನ್ನನ್ನು ಸಚಿವನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು” ಎಂದು ಅವರು ಸ್ಮರಿಸಿದರು.
“ಇಂದು ಡಿ.ಕೆ. ಶಿವಕುಮಾರ್ ಅವರ ಸಂಪುಟ ವಿಸ್ತರಣೆಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ ಅಂತಿಮ ಪ್ರಮಾಣ ವಚನಕ್ಕೆ ಕೆಲವೇ ಗಂಟೆಗಳ ಮುನ್ನ ನನ್ನ ಹೆಸರು ಪಟ್ಟಿಯಿಂದ ಮಾಯವಾಯಿತು. ಇದರಿಂದ ನನಗೆ ಅತೀವ ದುಃಖವಾಯಿತು” ಎಂದು ಅವರು ನುಡಿದರು.
ನಮ್ಮ ಪಕ್ಷದ ನನ್ನ ವೈರಿಗಳ ಇವತ್ತು ನನಗೆ ಸಚಿವ ಸ್ಥಾನ ತಪ್ಪಿಸಲು ಸಫಲರಾದರು. ಅವರಿಗೆ ಒಳ್ಳೆಯ ದಾಗಲಿ. ನಾವು ಪ್ರಾಮಾಣಿಕವಾಗಿ ರಾಜಕಾರಣ ಮಾಡೋಣ.
ಆದರೆ ತಾವು ಪಕ್ಷದ ಮೇಲೆ ಕೋಪಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಭರವಸೆ ನೀಡಿದವರೇ ಆ ಭರವಸೆಯನ್ನು ಈಡೇರಿಸದಿದ್ದುದು ನನಗೆ ಬೇಸರ ತಂದಿತು. ಈ ಕಾರಣಕ್ಕಾಗಿಯೇ ನಾನು ರಾಜೀನಾಮೆ ನೀಡಿದ್ದೆ” ಎಂದು ಸ್ಪಷ್ಟನೆ ನೀಡಿದರು.
ರಾಜೀನಾಮೆ ನೀಡಿದ ಬಳಿಕ ಹೈಕಮಾಂಡ್ ಮಟ್ಟದ ನಾಯಕರುಬ ಕರ್ನಾಟಕದ ಉಸ್ತುವಾರಿ ಸುರಜೇವಾಲ ತಮಗೆ ಕರೆ ಮಾಡಿ, ನಂತರ ಸ್ವತಃ ಮನೆಗೆ ಬಂದು ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿ ತಮ್ಮ ಕೆಲಸ-ಕಾರ್ಯಗಳನ್ನು ಸ್ಮರಿಸಿಕೊಂಡರು ಎಂದು ಶಾಸಕರು ತಿಳಿಸಿದರು.
“ಸನ್ನಿವೇಶದ ಕಾರಣ ನಿಮಗೆ ಭರವಸೆ ಈಡೇರಿಸಲಾಗಲಿಲ್ಲ, ಮುಂದಿನ ದಿನಗಳಲ್ಲಿ ಖಂಡಿತ ಅವಕಾಶ ನೀಡಲಾಗುವುದು ಎಂದು ಆ ನಾಯಕರು ಭರವಸೆ ನೀಡಿದರು. ಆದರೆ ನಾನು ಅವರಿಗೆ, ಭರವಸೆ ನೀಡಿದ್ದೀರಿ, ಅದನ್ನು ಏಕೆ ಈಡೇರಿಸಲಿಲ್ಲ ಎಂದು ಪ್ರಶ್ನಿಸಿದೆ” ಎಂದು ಅವರು ಹೇಳಿದರು.
“ನಾನು ಇಲ್ಲಿಗೆ ಶಾಸಕನಾಗಿ ಬಂದಿರುವುದು ನನ್ನ ಕ್ಷೇತ್ರದ ಜನರಿಂದ. ನಾನು ನಮ್ಮ ಜನತೆಯೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರಿಗೆ ತಿಳಿಸಿದ್ದೆ” ಎಂದು ತಾವು ಹೈಕಮಾಂಡ್ಗೆ ನೀಡಿದ್ದ ಉತ್ತರವನ್ನು ಅವರು ಸಭೆಯಲ್ಲಿ ವಿವರಿಸಿದರು.
“ನನಗೆ ಮೊದಲ ಆದ್ಯತೆ ಯಾವಾಗಲೂ ನನ್ನ ಕ್ಷೇತ್ರದ ಜನರ ಒಳಿತು. ನಾನೆಂದೂ ಅಧಿಕಾರದ ಆಸೆ ಇಟ್ಟುಕೊಂಡಿರಲಿಲ್ಲ. ಆದರೆ ಭರವಸೆ ಮುರಿದದ್ದಕ್ಕೆ ನನ್ನ ಅಸಮಾಧಾನ ವ್ಯಕ್ತಪಡಿಸಿದ್ದೆ. ನಿಮ್ಮೆಲ್ಲರ ಒತ್ತಾಸೆಯ ಮೇರೆಗೆ ನಾನು ನನ್ನ ರಾಜೀನಾಮೆಯನ್ನು ಹಿಂಪಡೆಯುತ್ತಿದ್ದೇನೆ” ಎಂದು ಘೋಷಿಸಿ, “ನಾನು ನಿಮ್ಮ ಶಾಸಕನಾಗಿದ್ದೇನೆ, ಇನ್ನೂ ಮುಂದೆಯೂ ಇರುತ್ತೇನೆ” ಎಂದು ಭರವಸೆ ನೀಡುವ ಮೂಲಕ ಮಾತು ಮುಗಿಸಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಬೆಂಬಲಿಗರು ಹರ್ಷ ವ್ಯಕ್ತಪಡಿಸಿ, ಶಾಸಕರ ಘೋಷಣೆಯನ್ನು ಸ್ವಾಗತಿಸಿದರು.