ಮಧುರಚೆನ್ನರು ವಿಶ್ವ ಶ್ರೇಷ್ಠ ಸಾಹಿತ್ಯ ರಚಿಸಿದ ಅನರ್ಘ್ಯ ಪ್ರತಿಭೆ-ಸಂತೋಷ ಬಂಡೆ
ಇಂಡಿ: ಹಳ್ಳಿಯಲ್ಲಿ ಹುಟ್ಟಿ, ಮುಲ್ಕಿ ಪರೀಕ್ಷೆ ಪಾಸು ಮಾಡಿ, ಅನುಭಾವ ಸಾಹಿತ್ಯದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಹಲಸಂಗಿ ಗೆಳೆಯರ ಬಳಗದ ಮಧುರಚೆನ್ನರು ವಿಶ್ವ ಶ್ರೇಷ್ಠ ಸಾಹಿತ್ಯ ರಚಿಸಿದ ಅನರ್ಘ್ಯ ಪ್ರತಿಭೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ಮಧುರಚೆನ್ನರ 123 ನೇ ಜನ್ಮದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲಸಂಗಿ ಗೆಳೆಯರ ಬಳಗ ಕಟ್ಟಿಕೊಂಡು ಹೆಣ್ಣುಮಕ್ಕಳು
ಹಾಡುವ ಜಾನಪದ ಪದಗಳನ್ನು ಸಂಗ್ರಹಿಸಿ ಪ್ರಕಟಿಸಿದ ಮಧುರಚೆನ್ನರ ಸಾಹಿತ್ಯಿಕ ಕೊಡುಗೆ ಅನನ್ಯ. ಅವರ ಶ್ರೇಷ್ಠ ಕೃತಿ ರತ್ನಗಳಾದ ʼಗರತಿಯ ಹಾಡುʼ, ನನ್ನ ನಲ್ಲ’ ಗಳಲ್ಲಿ
ದೇಸಿ ಸಂವೇದನೆ, ಭಕ್ತಿ ಹಾಗೂ ಆತ್ಮಸಂಶೋಧನೆ ಎದ್ದು ಕಾಣುತ್ತದೆ ಎಂದು ಹೇಳಿದರು.
ಕಜಾಪ ಅಧ್ಯಕ್ಷ ಆರ್ ವ್ಹಿ ಪಾಟೀಲ ಮಾತನಾಡಿ, ಕನ್ನಡ ನವೋದಯದ ಮಹತ್ವದ ಬರಹಗಾರರಾದ ಮಧುರಚೆನ್ನರ ಸಾಹಿತ್ಯಿಕ ಕಾರ್ಯ ಅನುಪಮವಾದುದು. ಅವರು ಶಾಸನಗಳು, ಜನಪದ ಸಾಹಿತ್ಯದ ಸಂಶೋಧನೆ ಮಾಡುತ್ತಾ, ಆಧ್ಯಾತ್ಮಿಕ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಎಂದು ಹೇಳಿದರು.
ಪಿಡಿಓ ಬಸವರಾಜ ಬಬಲಾದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧುರಚೆನ್ನರು ಕವಿಯಾಗಿ ಉಳಿಯದೆ, ಸಂಶೋಧಕ, ಗದ್ಯ ಲೇಖಕ, ಅನುವಾದಕರಾಗಿ ಎಲ್ಲಕ್ಕೂ ಮಿಗಿಲಾಗಿ ಜನಪದ ಸಾಹಿತ್ಯ ಸಂಗ್ರಹದ ಆದ್ಯ ಪ್ರವರ್ತಕರಲ್ಲೊಬ್ಬರಾಗಿ ಬೆಳಗಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಗ್ರಾಮ ಲೆಕ್ಕಾಧಿಕಾರಿ ಸತೀಶ ಬಿರಾದಾರ, ಕಾರ್ಯದರ್ಶಿ ಅಂಬಾನಾಥ ಶಿವಶರಣ, ಗ್ರಂಥಪಾಲಕ ಸಚೀನ ಹೊಸೂರ, ಶ್ರೀಧರ ಬಾಳಿ, ಶಿವು ಪೂಜಾರಿ, ಶರಣು ನಾಟಿಕಾರ, ಅಕ್ಬರ ಕೊರಬು, ಶಿವರಾಜ ವಾಲೀಕಾರ, ದೀಪಾ ಕಟ್ಟಿಮನಿ, ರಾಜಶ್ರೀ ದಳವಾಯಿ, ರಮೇಶ ಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.