ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಬಂಗಾರದ ಸಾಧನೆ; ಬಿ.ಎ.ಎಸ್. ಇಂಟರ್ನ್ಯಾಷನಲ್ ಸ್ಕೂಲ್ನಿಂದ ವಿದ್ಯಾರ್ಥಿಗಳಿಗೆ ಸನ್ಮಾನ
ಮುದ್ದೇಬಿಹಾಳ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಬಂಗಾರದ ಪದಕಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಬಿ.ಎ.ಎಸ್. ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಾದ ಶಕುಂತಲಾ ಶಾರದಳ್ಳಿ ಹಾಗೂ ವಿಕ್ರಾಂತ ಶಾರದಳ್ಳಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಭಾರತೀಯ ಡ್ರೀಮ್ ವರ್ಲ್ಡ್ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2ನೇ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
14 ವರ್ಷದ ವಯೋಮಿತಿಯ ಕತಾ ವಿಭಾಗದಲ್ಲಿ ಶಕುಂತಲಾ ಶಾರದಳ್ಳಿ ದ್ವಿತೀಯ ಸ್ಥಾನ ಹಾಗೂ ಕುಮಿತೆ (ಫೈಟಿಂಗ್) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ತಮ್ಮದಾಗಿಸಿಕೊಂಡರು.
11 ವರ್ಷದ ವಯೋಮಿತಿಯ ಕತಾ ಹಾಗೂ ಕುಮಿತೆ (ಫೈಟಿಂಗ್) ಎರಡೂ ವಿಭಾಗಗಳಲ್ಲಿ ವಿಕ್ರಾಂತ ಶಾರದಳ್ಳಿ ಪ್ರಥಮ ಸ್ಥಾನ ಗಳಿಸಿ ಎರಡು ಬಂಗಾರದ ಪದಕಗಳನ್ನು ಜಯಿಸಿ ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿದ ಶಾಲೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ, ಕ್ರೀಡೆ ಮತ್ತು ಶಿಕ್ಷಣವನ್ನು ಸಮಾನವಾಗಿ ಪ್ರೋತ್ಸಾಹಿಸುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಸುಮಂಗಲಾ ಬಿರಾದಾರ, ನಿರ್ದೇಶಕಿ ಗೀತಾ ಬಿರಾದಾರ, ಶಿವನಗೌಡ ಬಿರಾದಾರ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಫೋಟೊ: 27ಎಂಬಿಎಲ್2: ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ವ್ಯಾಪ್ತಿಯ ಬಿ.ಎ.ಎಸ್. ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಶಕುಂತಲಾ ಶಾರದಳ್ಳಿ ಹಾಗೂ ವಿಕ್ರಾಂತ ಶಾರದಳ್ಳಿ ಅವರನ್ನು ಸೋಮವಾರ ಸನ್ಮಾನಿಸಲಾಯಿತು.