ವರದಿ: ಸದ್ದಾಂ ಹುಸೇನ್ ಜಮಾದಾರ
ಎಪಿಎಂಸಿ ಹಿಂಭಾಗದಲ್ಲಿ ಕೆರೆಯಂತಾಗಿ ನಿಂತ ಗಟಾರ್ ನೀರು – ನರಕ ಜೀವನ ನಡೆಸುತ್ತಿರುವ ನಿವಾಸಿಗಳು, ನಗರಸಭೆ ವಿರುದ್ಧ ಆಕ್ರೋಶ
ಇಂಡಿ: ಇಂಡಿ ನಗರದ ಅಗರಖೇಡ ರಸ್ತೆಯಲ್ಲಿ ಇರುವ ಎ.ಪಿ.ಎಂ.ಸಿ ಹಿಂಭಾಗದಲ್ಲಿ ಗಟಾರ್ ನೀರು ತುಂಬಿ ಸ್ಥಳೀಯರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ. ಗಟಾರ್ ವ್ಯವಸ್ಥೆ ಸರಿಯಾಗಿ ನಿರ್ವಹಿಸದ ಕಾರಣ ಹಲವೆಡೆ ನೀರು ಜಮಾಯಾಗಿ ಕೆರೆಯಂತಾಗಿ ಮಾರ್ಪಟ್ಟಿದ್ದು, ಈ ಭಾಗದ ಜನರು ದುರ್ವಾಸನೆ ಮತ್ತು ಸೊಳ್ಳೆಗಳ ಕಾಟದ ನಡುವೆ ದಿನನಿತ್ಯದ ಜೀವನ ನಡೆಸುವಂತಾಗಿದೆ.
ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ಗಟಾರ್ ವ್ಯವಸ್ಥೆ ಸರಿಯಾಗಿ ಇಲ್ಲ, ಸ್ಟ್ರೀಟ್ ಲೈಟ್ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿಲ್ಲ ಹಾಗೂ ಸರಿಯಾದ ರಸ್ತೆಗಳೂ ಇಲ್ಲ. ಸ್ವಚ್ಛತಾ ಕಾರ್ಯವೂ ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸಿಂದಗಿ ರಸ್ತೆಯಿಂದ ಹರಿದುಬರುವ ಗಟಾರ್ ನೀರು ಎ.ಪಿ.ಎಂ.ಸಿ ಹಿಂದುಗಡೆ ಇರುವ ಖಾಲಿ ಪ್ಲಾಟಿನಲ್ಲಿ ದಿನೇದಿನೇ ಜಮಾವಾಗುತ್ತಿದ್ದು, ಸುತ್ತಮುತ್ತಲಿನ ಖಾಲಿ ಜಾಗಗಳಲ್ಲಿ ಕೂಡ ನೀರು ನಿಂತು ಕೆರೆಯಂತಾಗಿ ಮಾರ್ಪಟ್ಟಿದೆ. ಇದರಿಂದ ಇಲ್ಲಿಯ ಪರಿಸರ ಅಸ್ವಚ್ಛವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಇದೇ ಪ್ರದೇಶದಲ್ಲಿ ಹಲವೆಡೆ ಮುಳ್ಳಿನ ಗಿಡಗಳು ಮತ್ತು ಕಂಟೆಗಳ ಮರಗಳು ಬೆಳೆದಿದ್ದು, ಅವುಗಳಿಂದ ಕೂಡ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸಂಚರಿಸಲು ಸರಿಯಾದ ರಸ್ತೆ ಅಥವಾ ಸ್ವಚ್ಛವಾದ ಜಾಗವೂ ಇಲ್ಲದ ಕಾರಣ ಪ್ರತಿದಿನವೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲವೆಡೆ ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿಸಿ) ಕೆಳಭಾಗದಲ್ಲಿಯೂ ಗಟಾರ್ ನೀರು ನಿಂತಿರುವುದು ಕಂಡುಬಂದಿದ್ದು, ಇದರಿಂದ ಯಾವುದೇ ಕ್ಷಣದಲ್ಲಿ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ.
ಈ ವಾರ್ಡ್ನ ಸಮಸ್ಯೆಗಳ ಕುರಿತು ಹಲವಾರು ಬಾರಿ ನಗರಸಭೆಗೆ ತಿಳಿಸಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬೇಸತ್ತ ನಿವಾಸಿಗಳು ನಗರಸಭೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಗಟಾರ್ ಸ್ವಚ್ಛತೆ ನಡೆಸಿ ನೀರು ಸರಿಯಾಗಿ ಹರಿಯುವ ವ್ಯವಸ್ಥೆ ಮಾಡಬೇಕು, ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ ರಸ್ತೆ ಮತ್ತು ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.