ಭಗೀರಥರು ಛಲ,ದೃಢಸಂಕಲ್ಪದ ಪ್ರತೀಕ-ಸಂತೋಷ ಬಂಡೆ
ಇಂಡಿ: ಕಠಿಣ ತಪಸ್ಸಿನ ಮೂಲಕ ಭಕ್ತಿ, ಬದ್ಧತೆ ಪ್ರದರ್ಶಿಸಿದ
ಭಗೀರಥರು ಸಮಾಜದ ಒಳಿತಿಗಾಗಿ ತಪಸ್ಸು ಮಾಡಿದ ಛಲಗಾರ. ಸಮಾಜ-ದೇಶದ ಹಿತಕ್ಕಾಗಿ ಶ್ರಮಿಸುವುದೇ ನಿಜವಾದ ಭಗೀರಥತ್ವ. ಅವರ ಬದುಕೇ ಇಂದಿನ ಪೀಳಿಗೆಗೆ ಮಾರ್ಗದರ್ಶಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಗುರುವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಭಗೀರಥರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕ ಕಾಲದ ಒತ್ತಡ, ಸವಾಲು, ನಕಾರಾತ್ಮಕತೆಯ ನಡುವೆ ಬದುಕುವ ಮನುಷ್ಯನಿಗೆ ಭಗೀರಥರ ಜೀವನವು ಆದರ್ಶವನ್ನು ನೀಡುತ್ತದೆ. ಗಂಗೆಯನ್ನು ಭೂಮಿಗೆ ತರಲು ಅವರು ತೋರಿದ ಛಲ, ಬದ್ಧತೆ, ಸಮಾಜಪರ ಕಾಳಜಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಭಗೀರಥರು ಶಿವನ ಸಹಾಯ ಪಡೆದಂತೆ, ಇಂದಿನ ಪೀಳಿಗೆ ಜ್ಞಾನ-ತಂತ್ರಜ್ಞಾನ ಬಳಸಿಕೊಂಡು, ಸರಿಯಾದ ಯೋಜನೆ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಸಾಧಿಸಿ, ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಮಾತನಾಡಿ, ಭಗೀರಥ ಮಹರ್ಷಿ ತನ್ನ ಘೋರ ತಪಸ್ಸಿನ ಮೂಲಕ ಕಠಿಣ ಕಾರ್ಯ ಪೂರೈಸಿ ಪವಿತ್ರ ಗಂಗೆಯನ್ನು ಭೂಮಿಗೆ ತಂದ ಚೈತನ್ಯದ ಚಿಲುಮೆ.ಅವರು ಛಲ, ದೃಢಸಂಕಲ್ಪದ ಪ್ರತೀಕ ಎಂದು ಹೇಳಿದರು.
ಶಿಕ್ಷಕರಾದ ನಿಂಗಪ್ಪ ನಾವದಗಿ, ಶಾಂತೇಶ ಹಳಗುಣಕಿ ಉಪಸ್ಥಿತರಿದ್ದರು.
ಭಗೀರಥರ ಬದುಕು ನಮಗೆ “ಶ್ರಮವೇ ಸೌಭಾಗ್ಯ”ಮತ್ತು “ಸಂಕಲ್ಪವೇ ವಿಜಯ”ಎಂಬ ಮಂತ್ರವನ್ನು ಬೋಧಿಸುತ್ತದೆ.