ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಪ್ರಧಾನದಲ್ಲಿ ಅಕ್ರಮಗಳು , ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಮತ್ತು ವಿದ್ಯಾರ್ಥಿನಿಯರ ಶೋಷಣೆಯನ್ನು ಆಮ್ ಆದ್ಮಿ ಪಾರ್ಟಿ ಖಂಡನೆ
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಏಕೈಕ ಮಹಿಳಾ ಶಿಕ್ಷಣದ ಪ್ರತೀಕವಾಗಿ ರಾಜ್ಯದಲ್ಲಿ ಖ್ಯಾತಿ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಪ್ರವೇಶಾತಿ, ಮಾರ್ಗದರ್ಶನ ಮತ್ತು ಪದವಿ ಪ್ರಧಾನ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು, ನಿಯಮ ಉಲ್ಲಂಘನೆಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಬಲವಾಗಿ ಕೇಳಿಬರುತ್ತಿವೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ನೀಡಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು “ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರಿಂದ ಬಂದಿರುವ ದೂರುಗಳ ಪ್ರಕಾರ, ಪಿ.ಎಚ್.ಡಿ. ಪ್ರಕ್ರಿಯೆಯಲ್ಲಿ ಯು.ಜಿ.ಸಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ, ಅನರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ ಮತ್ತು ವಿದ್ಯಾರ್ಥಿನಿಯರ ಮೇಲೆ ಶೋಷಣೆ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಮುಂದುವರೆದು ಅವರು ಮಾತನಾಡುತ್ತಾ “ಇದು ತುಂಬಾ ಗಂಭೀರದ ವಿಷಯ. ಶೈಕ್ಷಣಿಕ ಕ್ಷೇತ್ರದಲ್ಲಿ ನಿಯಮ ಉಲ್ಲಂಘನೆ ಆಗುತ್ತಿದ್ದರೆ ಅದು ಸಮಾಜಕ್ಕೆ ದೊಡ್ಡ ಹಾನಿ. ಪಿ.ಎಚ್.ಡಿ ಅಂದರೆ ಮೂಲ ಸಂಶೋಧನೆ, ಗುಣಮಟ್ಟ, ಮತ್ತು ನೈತಿಕತೆಯ ಸಂಕೇತ. ಅದನ್ನು ಅಕ್ರಮ ಮಾರ್ಗಗಳಿಂದ ಪಡೆಯುವುದು ಅಥವಾ ಅನುಮತಿಸುವುದು ಇಡೀ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ” ಎಂದು ಭೋಗೇಶ್ ಸೋಲಾಪುರ್ ಕಳವಳ ವ್ಯಕ್ತಪಡಿಸಿದರು.
“ವಿಶ್ವವಿದ್ಯಾಲಯಗಳು ಸ್ವಾಯತ್ತತೆ ಹೊಂದಿರಬೇಕು, ಆದರೆ ಅದು ನಿಯಮಗಳನ್ನು ಮೀರಲು ಅವಕಾಶ ನೀಡುವಂತಿಲ್ಲ. ರಾಜ್ಯಪಾಲರು ಅನುಮೋದಿಸಿದ ನಿಯಮಗಳನ್ನು ವಿಶ್ವವಿದ್ಯಾಲಯವೇ ಉಲ್ಲಂಘಿಸುತ್ತಿದೆ ಎಂಬ ಆರೋಪ ಬಂದರೆ, ಇದು ತನಿಖೆಗೆ ಅರ್ಹವಾಗಿದೆ. ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಇಂತಹ ಆರೋಪಗಳು ಬಂದಿದ್ದರೆ, ಸ್ಥಳೀಯ ಶೈಕ್ಷಣಿಕ ಗುಣಮಟ್ಟದ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ” ಎಂದು ಭೋಗೇಶ್ ಸೋಲಾಪುರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕ ಈ ಅಕ್ರಮಗಳನ್ನು ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಭವಿಷ್ಯದೊಂದಿಗೆ ಆಟವಾಡುವ ಈ ರೀತಿಯ ಭ್ರಷ್ಟಾಚಾರವು ಸಮಾಜದ ಮೂಲಭೂತ ಮೌಲ್ಯಗಳನ್ನು ಕೆಡಿಸುತ್ತಿದೆ. ಪಿ.ಎಚ್.ಡಿ. ಪ್ರವೇಶಾತಿಯಿಂದ ಹಿಡಿದು ಪದವಿ ಅವಾರ್ಡ್ ಆಗುವವರೆಗಿನ ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು, ಅರ್ಹ ವಿದ್ಯಾರ್ಥಿನಿಯರಿಗೆ ಅನ್ಯಾಯ ಮಾಡುತ್ತಿದೆ ಮತ್ತು ವಿಶ್ವವಿದ್ಯಾಲಯದ ಖ್ಯಾತಿಗೆ ಕಳಂಕ ತರುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿ ಮಾನ್ಯ ರಾಜ್ಯಪಾಲರಿಗೆ ಆಗ್ರಹಿಸುವುದೇನೆಂದರೆ,
.
ವಿಶ್ವವಿದ್ಯಾಲಯದ ವ್ಯವಸ್ಥಾಪಕರು, ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಅಥವಾ ಯು.ಜಿ.ಸಿ ಇದನ್ನು ಗಂಭೀರವಾಗಿ ತೆಗೆದುಕೊಂಡು “ಸ್ವತಂತ್ರ ತನಿಖೆ” ಮಾಡಬೇಕು ಅಥವಾ ವಿಶ್ವವಿದ್ಯಾಲಯದ ಉನ್ನತ ಸಮಿತಿ ರಚಿಸಿ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಅಗತ್ಯ — ಆನ್ಲೈನ್ನಲ್ಲಿ ಪಿ.ಎಚ್.ಡಿ ಅರ್ಜಿ, ಮಾರ್ಗದರ್ಶಕ ನೇಮಕ, ಪ್ರಗತಿ ವರದಿ ಎಲ್ಲವೂ ಸ್ಪಷ್ಟವಾಗಿರಬೇಕು.
. ಪಿ.ಎಚ್.ಡಿ. ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಿ, ಯು.ಜಿ.ಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
. ವಿದ್ಯಾರ್ಥಿನಿಯರ ಮೇಲಿನ ಶೋಷಣೆಯನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ದೂರುಗಳಿಗೆ ತ್ವರಿತ ಪರಿಹಾರ ಒದಗಿಸಬೇಕು.
ಅನರ್ಹ ಅಭ್ಯರ್ಥಿಗಳಿಗೆ ನೀಡಲಾದ ಪಿ.ಎಚ್.ಡಿ. ಪದವಿಗಳನ್ನು ಪರಿಶೀಲಿಸಿ, ಅಕ್ರಮಗಳಿದ್ದಲ್ಲಿ ಅಂತಹ ಪದವಿಗಳನ್ನು ರದ್ದುಗೊಳಿಸಬೇಕು.
. ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರ ವಿರೋಧಿ ಧ್ವನಿಯಾಗಿ ನಿಂತಿದೆ. ವಿಜಯಪುರದ ಈ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ನಿಜವಾದ ಶಿಕ್ಷಣ ಕೇಂದ್ರವಾಗಿ ಮಾರ್ಪಡಬೇಕು, ಭ್ರಷ್ಟಾಚಾರದ ಕೇಂದ್ರವಾಗಬಾರದು.
ರಾಜ್ಯ ಸರ್ಕಾರ ಮತ್ತು ಮಹಿಳಾ ವಿಶ್ವವಿದ್ಯಾಲಯ ಆಡಳಿತ ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ, ಆಮ್ ಆದ್ಮಿ ಪಕ್ಷ ವಿಜಯಪುರ ಘಟಕ ರಸ್ತೆಗಿಳಿದು ಪ್ರತಿಭಟನೆ ನಡೆಸುವುದರ ಜೊತೆಗೆ ಕಾನೂನು ಹೋರಾಟಕ್ಕೂ ಮುಂದಾಗುತ್ತದೆ ಹಾಗೂ ಭ್ರಷ್ಟಾಚಾರಕ್ಕೆ ಶೂನ್ಯ ಸಹನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆಗೆ ಒತ್ತಾಯ ಮಾಡುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಎಂದು ಎಚ್ಚರಿಕೆ ನೀಡಿದರು.