ಅಲ್ಪಸಂಖ್ಯಾತರ ಕಲ್ಯಾಣ
ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಲ್ಲಿ 150 ಸಂಖ್ಯಾಬಲದ 25 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 25 ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 50ರಷ್ಟು ಹೆಚ್ಚಿಸಲಾಗುವುದು.
ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೇ ಹೆಚ್ಚಿನ ಬೇಡಿಕೆ ಇರುವ ಕಾರಣ ಸಂತ ಶಿಶುನಾಳ ಶರೀಫರವರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳನ್ನು CBSE ಪಠ್ಯಕ್ರಮದಡಿ ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗುವುದು.
2026-27ನೇ ಸಾಲಿನಲ್ಲಿ 25 ಸಂತ ಶಿಶುನಾಳ ಶರೀಫರ ಹೆಸರಿನ ವಸತಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು.
2025-26ನೇ ಸಾಲಿನಲ್ಲಿ 117 ಮೌಲಾನಾ ಆಜಾದ್ ಮಾದರಿ ಶಾಲೆಗಳು ಹಾಗೂ ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ 100 ಶಾಲೆಗಳನ್ನು 400 ಕೋಟಿ ರೂ. ವೆಚ್ಚದಲ್ಲಿ ಇದೇ ಮಾದರಿಯಲ್ಲಿ ಉನ್ನತೀಕರಿಸಲಾಗುವುದು.
ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಮೊರಾಜಿ ದೇಸಾಯಿ ವಸತಿ ಶಾಲೆಗಳ ಪೈಕಿ 25 ವಸತಿ ಶಾಲೆಗಳಲ್ಲಿ ಪಿ.ಯು.ಸಿ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಪ್ರಾರಂಭಿಸಲಾಗುವುದು. 18 ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲಾಗುವುದು.
. ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿ, ಅವರಿಗೆ K-CET / JEE / NEET ಪರೀಕ್ಷೆಗಳಿಗಾಗಿ ಗುಣಮಟ್ಟದ ತರಬೇತಿ ನೀಡಲು ನಾಲ್ಕು ವಸತಿ ಶಾಲೆಗಳನ್ನು Center of Excellence ಆಗಿ ಸ್ಥಾಪಿಸಲಾಗುವುದು. ಅಲ್ಲದೆ 20 ವಸತಿ ಶಾಲೆಗಳ ಮಕ್ಕಳಿಗೆ CET / JEE / NEET ವಿಶೇಷ ತರಬೇತಿ ನೀಡಲಾಗುವುದು.
ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ನಿರಂತರ ಕಲಿಕಾ ಅವಕಾಶಗಳನ್ನು ಒದಗಿಸಲು ಹಾಗೂ ಜ್ಞಾನವನ್ನು ವೃದ್ಧಿಸಲು ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರಗಳು ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಬೆಂಗಳೂರಿನಲ್ಲಿ 100 ಸಂಖ್ಯಾಬಲದ ನಾಲ್ಕು ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವುದು.
ಜೈನ್, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.
ಬೌದ್ಧ ಧರ್ಮದ ಧರ್ಮಾಚಾರ್ಯರಿಗೆ ಮಾಸಿಕ 6,000 ರೂ. ಗೌರವಧನ ನೀಡಲಾಗುವುದು.
ಅಲ್ಪಸಂಖ್ಯಾತ ಸಮುದಾಯದ ನಿರ್ಗತಿಕ ಜನರಿಗಾಗಿ 100 ಸಂಖ್ಯಾಬಲದ ಎರಡು ಮಹಿಳಾ ವೃದ್ಧಾಶ್ರಮಗಳನ್ನು ಪ್ರಾರಂಭಿಸಲು ನೆರವು ನೀಡಲಾಗುವುದು.
ಅಲ್ಪಸಂಖ್ಯಾತರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಉನ್ನತ ಮಟ್ಟದ ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸಲು 5,000 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಗೆ ತಲಾ 50,000 ರೂ. ನೀಡಲಾಗುವುದು.
ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್, ಟ್ರೈಲರ್ ಅಥವಾ ಮೊಬೈಲ್ ಕಿಚನ್ ಫುಡ್ ಕಿಯಾಸ್ಕ್ (Kiosk) ಸೌಲಭ್ಯಗಳಿಗಾಗಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಘಟಕ ವೆಚ್ಚದ 75% ಅಥವಾ ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡಲಾಗುವುದು.
ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಉತ್ತೇಜನ ನೀಡಲು ಅಲ್ಪಸಂಖ್ಯಾತ ಮಹಿಳಾ ಕೋ-ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಲಾಗುವುದು.
ಹಿರಿಯ ನಾಗರಿಕರಿಗೆ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳು ನಡೆಸುವ 10 ವೃದ್ಧಾಶ್ರಮಗಳಲ್ಲಿ ಸಮಗ್ರ ಜೆರಿಯಾಟ್ರಿಕ್ ಮತ್ತು ಪ್ಯಾಲಿಯೇಟಿವ್ ಕೇರ್ ಘಟಕಗಳನ್ನು ಸ್ಥಾಪಿಸಲು ತಲಾ 50 ಲಕ್ಷ ರೂ.ಗಳಂತೆ ಒಟ್ಟು 5 ಕೋಟಿ ರೂ. ಅನುದಾನ ನೀಡಲಾಗುವುದು.
ಬೆಂಗಳೂರಿನ ಕೆಂಗೇರಿಯಲ್ಲಿ ಆಸ್ಟಿನ್ ಟೌನ್ ಬೆಂಡಿಕ್ಟೈನ್ ಮಠದ ಎರಡು ಏಕರೆ ಜಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲು ಮೂಲಸೌಕರ್ಯ ನಿರ್ಮಾಣಕ್ಕೆ 5 ಕೋಟಿ ರೂ. ಒದಗಿಸಲಾಗುವುದು.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಇತರ ಸಮಾಜ ಸುಧಾರಕರ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದಿಸಲಾಗುವುದು.
ಹಜ್ ಯಾತ್ರಿಕರು ಮತ್ತು ಅವರ ಸಂಬಂಧಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನಗಳನ್ನು ನಿರ್ಮಿಸಲಾಗುವುದು.
ವಕ್ಫ್ ಸಂಸ್ಥೆಗಳಲ್ಲಿರುವ 31 ಮಹಿಳಾ ಪಿ.ಯು. ಕಾಲೇಜುಗಳನ್ನು ಪದವಿ ಕಾಲೇಜುಗಳಾಗಿ ಉನ್ನತೀಕರಿಸಲಾಗುವುದು. ಜೊತೆಗೆ ಸವಣೂರಿನಲ್ಲಿ ಒಂದು ಹೊಸ ಮಹಿಳಾ ಪಿ.ಯು. ಕಾಲೇಜನ್ನು ಪ್ರಾರಂಭಿಸಲಾಗುವುದು.
ವಾಣಿಜ್ಯ ಉದ್ದೇಶಕ್ಕಾಗಿ ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ ವಕ್ಫ್ ಆಸ್ತಿಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
ಬೀದರಿನ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದಲ್ಲಿ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು.