ವಿವೇಕರ ಚಿಂತನೆಗಳು ವ್ಯಕ್ತಿತ್ವ ವಿಕಸನಕ್ಕೆ ಶಾಶ್ವತ ಪ್ರೇರಣೆ- ಸಂತೋಷ ಬಂಡೆ
ಇಂಡಿ: ಸ್ವಾಮಿ ವಿವೇಕಾನಂದರ ಬದುಕು-ಬೋಧನೆಗಳು ನಿರ್ಭಯತೆ, ಆತ್ಮವಿಶ್ವಾಸ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿ ಇಂದಿನ ಯುವ ಪೀಳಿಗೆಗೆ ನಿರಂತರ ಸ್ಫೂರ್ತಿಯಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ನಗರದ ಬಸವರಾಜೇಂದ್ರ ದೇವಸ್ಥಾನದಲ್ಲಿ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಹಾಗೂ ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ವತಿಯಿಂದ ಜರುಗಿದ 102 ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾಧನೆ’ ಕುರಿತು ಮಾತನಾಡಿದರು.
ಸ್ವಾಮಿ ವಿವೇಕಾನಂದರ ವಿಚಾರಗಳು ಆತ್ಮವಿಶ್ವಾಸ, ಯುವಶಕ್ತಿ ಮತ್ತು ಮಾನವೀಯ ಸೇವೆಗೆ ಒತ್ತು ನೀಡುತ್ತವೆ.
ಯುವಕರು ದೇಶದ ಭವಿಷ್ಯ. ಅವರು ಅದಮ್ಯ ಶಕ್ತಿ, ಧೈರ್ಯ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಬೇಕು. ವಿವೇಕರ ಚಿಂತನೆಗಳು ಭಾರತದ ಯುವಶಕ್ತಿಗೆ, ರಾಷ್ಟ್ರ ನಿರ್ಮಾಣಕ್ಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಶಾಶ್ವತ ಪ್ರೇರಣೆಯಾಗಿವೆ ಎಂದು ಹೇಳಿದರು.
ವಿವೇಕಾನಂದರ ಕಾಯಕಗಳು ಆದರ್ಶವಾಗಿವೆ.ಅವರ ಮಾತುಗಳು ಚಿನ್ನದ ತೂಕಕ್ಕೆ ಸಮ. ಅವರ ವಿವೇಕಯುತ ಆಲೋಚನೆಗಳು ಭಾರತೀಯ ಸಮಾಜ ಮತ್ತು ರಾಷ್ಟ್ರೀಯ ಪ್ರಜ್ಞೆಯ ಮೇಲೆ ಪ್ರಭಾವ ಬೀರಿ, ಭಾರತವನ್ನು ಮೀರಿ ಹೊರದೇಶಕ್ಕೂ ಪಸರಿಸಿವೆ ಎಂದು ಹೇಳಿದರು.
ಕವಲಗಿಯ ಸಿದ್ದರಾಮೇಶ್ವರ ಮಠದ ಡಾ ಅಭಿನವ ಸಿದ್ದರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ,
ವಿವೇಕರ ಕ್ರಾಂತಿಕಾರಿ ವಿಚಾರಗಳಿಗೆ ಜನಮನದಲ್ಲಿರುವ ಮೌಢ್ಯದ ಕಾರ್ಗತ್ತಲೆಯನ್ನು ತೊಲಗಿಸಿ, ಜ್ಞಾನದ ಬೆಳಕನ್ನು ಹರಡುವ ಶಕ್ತಿಯಿದೆ. ಅದಕ್ಕಾಗಿ ಇಂದಿನ ಯುವಪೀಳಿಗೆ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಸಾಗಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಸಿ ಎಂ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಲಚ್ಯಾಣ ಸರಕಾರಿ ಪ ಪೂ ಕಾಲೇಜಿನ ನಿವೃತ್ತ ಉಪನ್ಯಾಸಕ ಎಚ್ ಎಸ್ ಗೋಟ್ಯಾಳ ಅವರನ್ನು ಸನ್ಮಾನಿಸಲಾಯಿತು. ಸಿದ್ದಣ್ಣ ಬಸಪ್ಪ ಕೊಪ್ಪ ಅವರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಸತ್ಸಂಗ ಸಮಿತಿ ಕಾರ್ಯದರ್ಶಿ ಆರ್ ವ್ಹಿ ಪಾಟೀಲ ಶಿಕ್ಷಕರು ಸ್ವಾಗತಿಸಿದರು. ಸಹ ಕಾರ್ಯದರ್ಶಿ ಎಸ್ ಎಸ್ ಈರನಕೇರಿ ನಿರೂಪಿಸಿದರು. ಕೆ ಜಿ ನಟೀಕಾರ ಶಿಕ್ಷಕರು ವಂದಿಸಿದರು.
ಕಾರ್ಯಕ್ರಮದಲ್ಲಿ ಸತ್ಸಂಗ ಸಮಿತಿ ಅಧ್ಯಕ್ಷ ಪ್ರೊ ಐ ಬಿ ಸುರಪುರ, ಪ್ರೊ ಎಂ ಜೆ ಪಾಟೀಲ, ಎಚ್ ಆರ್ ಬಿರಾದಾರ, ಬಿ ಆರ್ ಬಿರಾದಾರ, ಎನ್ ಟಿ ಸಂಗ, ಖಾಜಿ ಸರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿವೇಕ ಜಾಗೃತ ಬಳಗದಿಂದ ಭಜನೆ ನಡೆಯಿತು. ಎಚ್ ಎಸ್ ಎಳೆಗಾಂವ ಸಂಗೀತ ಸೇವೆ ಸಲ್ಲಿಸಿದರು.
ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳುಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ