ಉದ್ಯಾನವನ ಜಾಗೆ ಕಬಳಿಕೆಗೆ ಹುನ್ನಾರ; ಕ್ರಮಕ್ಕೆ ಶಾಸಕ ಯತ್ನಾಳ ಒತ್ತಾಯ
ವಿಜಯಪುರ: ನಗರದಲ್ಲಿ ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ವಿಜಯಪುರ ನಗರದ ವಾರ್ಡ್ ನಂ.10 ರಲ್ಲಿ ಬರುವ ಗಚ್ಚಿನಕಟ್ಟಿ ಕಾಲೊನಿಯ ಮಹಾಲ್ ಬಾಗಾಯತ ಸ.ನಂ.21/ಹ ಪ್ಲಾಟ್ ನಂ.21ನ್ನು ಕೆಲವರು ಕಬಳಿಸಲು ಯತ್ನಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2024 ರ ಡಿಸೆಂಬರ್ 6 ರಂದು ವಾರ್ಡ್ ನಂ.13ರ ರಾಧಾಬಾಯಿ ದೇವಗಿರಿ ಅವರು ಜಿಲ್ಲಾಧಿಕಾರಿಗಳಿಗೆ, ವಾರ್ಡ್ ನಂ.10ರ ಸದಸ್ಯೆ ಎಸ್.ಎಸ್.ಕುಮಸಿ ಅವರು ಭೂದಾಖಲೆಗಳ ಇಲಾಖೆ ಸಹಾಯ ನಿರ್ದೇಶಕರಿಗೆ ಹಾಗೂ ಸಾರ್ವಜನಿಕರು ಮಹಾನಗರ ಪಾಲಿಕೆ ಆಯುಕ್ತರಿಗೆ ಸದರಿ ಸಾರ್ವಜನಿಕ ಉದ್ಯಾನವನ ಜಾಗೆ ಕಬಳಿಕೆ ಜೊತೆಗೆ ಒತ್ತುವರಿ ಆಗಿರುವುದನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸಹ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಒತ್ತುವರಿ ತೆರವುಗೊಳಿಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದರಂತೆ ಸದರಿ ಜಾಗೆಯ ಅಳತೆ ಕೆಲಸ ಪೂರೈಸಿ, ಹದ್ದು ತೋರಿಸಿ ನಕ್ಷೆ ತಯಾರಿಸಿದ ವರದಿಯನ್ನು ಪಾಲಿಕೆಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಿಂದ ಸಲ್ಲಿಸಲಾಗಿದೆ.
ಸದರಿ ಜಾಗೆಯ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದಾಗ ಶಿವಾನಂದ ಭಯಾರ, ಹಾಫೀಜಸಾಬ ಅಬ್ದುಲಸಾಹೇಬ ಮಕಾನದಾರ ಎಂಬುವರು ಜಂಟಿಯಾಗಿ ಸ.ನಂ.21ಅ ಹಿಸ್ಸಾ 6 ರ 17 ಗುಂಟೆ ಜಮೀನನ್ನು ಹಳೆಯ ಕೈಬರಹ ಉತಾರೆ ಮೇಲೆ ಮಾಡಿಕೊಂಡಿರುವ ಇಸಾರ ಕರಾರು ಪತ್ರ ತೋರಿಸಿ,
ಸದರಿ ಜಮೀನಿಗೆ ಹೊಂದಿಕೊಂಡಿರುವ ಸ.ನಂ.21/ಹ ದಲ್ಲಿನ ಪ್ಲಾಟ್ ನಂ.21ರ ಸಾರ್ವಜನಿಕರ ಉಪಯೋಗಕ್ಕಾಗಿ ಕಾಯ್ದಿರಿಸಲಾದ ವಿಶಾಲವಾದ ಬೆಲೆಬಾಳುವ ಉದ್ಯಾನವನ ಜಾಗವನ್ನು ತಮ್ಮದೆಂದು ಅಕ್ರಮವಾಗಿ ಕಬಳಿಸಲು ಹುನ್ನಾರ ನಡೆಸಿರುವುದು ಕಂಡು ಬಂದಿದ್ದು, ಇದನ್ನು ಪ್ರಶ್ನಿಸಿದ ಸ್ಥಳೀಯ ನಿವಾಸಿಗಳಿಗೆ ಧಮಕಿ ಹಾಕುತ್ತಿರುವುದನ್ನು ನನ್ನ ಗಮನಕ್ಕೆ ತಂದಿದ್ದಾರೆ.
ಈಗಾಗಲೇ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಈ ಉದ್ಯಾನವನದ ಜಾಗೆಯು ಗಣಕಯಂತ್ರದಲ್ಲಿ ನೊಂದಾಯಿಸಿಲ್ಲವೆಂದು ಮತ್ತು ಇದರಲ್ಲಿ ಭೂಮಾಫಿಯಾದವರಿಂದ ಗೋಲಮಾಲ್ ಆಗಿರುವುದು ನಗರದ ನಾಗರಿಕರು ಬೆಚ್ಚಿಬಿಳುವಂತೆ ಮಾಡಿದೆ. ಸದರಿ ಗಚ್ಚಿನಕಟ್ಟಿ ಕಾಲೊನಿ ಕೆಜೆಪಿ ಆಗಿ ನಗರಕೋಶ ದಿಂದ ನಕ್ಷೆ ತಯಾರಾಗಿದ್ದರೂ,
ಇಂತಹ ಜಾಗವನ್ನು ತಮ್ಮ ಖಾಸಗಿ ಜಾಗವನ್ನಾಗಿ ಹೊಂದಲು ಪ್ರಯತ್ನಿಸುತ್ತಿರುವ ನಗರದಲ್ಲಿ ಮತ್ತು ಸಮಾಜದಲ್ಲಿ ಮಹಾನ್ ನಾಯಕರೆನಿಸಿಕೊಂಡ ಹಿಂದಿನ ಕಾರ್ಪೋರೇಟರ್ ಉಮೇಶ ವಂದಾಲ ಮುಸ್ಲಿಂ ಭೂಮಾಫಿಯಾದವರ ಜೊತೆ ಸೇರಿ ನಾನೇ ಖರೀದಿ ಮಾಡಿದ್ದೇನೆ. ಇದಕ್ಕೆ ಯಾರೂ ತಕರಾರು ಮಾಡಬೇಡಿ ಎಂದು ಒತ್ತಾಯಿಸುತ್ತಿರುವುದಾಗಿ ಕಾಲನಿ ನಾಗರಿಕರು ನನ್ನ ಗಮನಕ್ಕೆ ತಂದಿರುತ್ತಾರೆ.
ಹೀಗೆ ಮುಸ್ಲಿಂರ ಹೆಸರಿನಿಂದ ಖರೀದಿಸಿ, ನಂತರ ತಮ್ಮ ಹೆಸರಿನಿಂದ ಖರೀದಿಸಿ ಮಾಲೀಕರಾಗುವ ಹುನ್ನಾರ ನಡೆಸಿರುವುದು ಮತ್ತು ಇದೇ ರೀತಿ ನಗರದ ಎಷ್ಟೋ ಕಡೆ ಈ ರೀತಿ ಸರ್ಕಾರಿ, ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಜಾಗಗಳು ಅಕ್ರಮವಾಗಿ ಖಾಸಗಿಯವರ ಹೆಸರಿನಲ್ಲಾಗುತ್ತಿರುವುದು ನೋಡಿದರೆ ಇಂತಹ ಭೂಮಾಫಿಯಾದವರ ಜೊತೆ ನಗರದಲ್ಲಿ ದೊಡ್ಡ ನಾಯಕರೆನಿಸಿಕೊಂಡವರೇ ಸೇರಿ ಇಲಾಖೆಯ ಅಧಿಕಾರಿಗಳು ಸಹ ಶಾಮೀಲಾಗಿರುವುದು ಸ್ಪಷ್ಟವಾಗುತ್ತದೆ.
ಇದರಿಂದ ನಗರದ ನಾಗರಿಕರು ಎಚ್ಚೆತ್ತುಕೊಂಡು ತಮ್ಮ ತಮ್ಮ ಬಡಾವಣೆ/ಕಾಲೊನಿಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ, ಇತರೆ ಸರ್ಕಾರಿ ಉದ್ದೇಶಕ್ಕಾಗಿ ಕಾಯ್ದಿರಿಸಿದ ಜಾಗೆಯನ್ನು ಯಾರಾದರೂ ಅಕ್ರಮವಾಗಿ ಪಡೆದಿರುವುದು ಅಥವಾ ಅಕ್ರಮ ನಿರ್ಮಾಣಕ್ಕೆ ಮತ್ತು ಅತೀಕ್ರಮಣ ಮಾಡುತ್ತಿರುವುದು ಕಂಡು ಬಂದಲ್ಲಿ ತಕ್ಷಣ ನಮ್ಮ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಜಗದೀಶ ಅಬ್ದುಲಪುರ ಮೊ.9880636508, ರಾಜಕುಮಾರ ಬಿರಾದಾರ ಮೊ.9449752896 ನಂಬರಗೆ ಸಂಪರ್ಕಿಸಿ ಅಥವಾ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಬೇಕು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಉದ್ಯಾನವನ ಜಾಗದ ಹದ್ದುಬಸ್ತು ಗುರುತಿಸಿ, ಸುತ್ತಲು ಆವರಣ ಗೋಡೆ ನಿರ್ಮಿಸಿ, ಅಭಿವೃದ್ಧಿಪಡಿಸಬೇಕು. ಮತ್ತು ಕಬಳಿಸಲು ಹುನ್ನಾರ ನಡೆಸುತ್ತಿರುವ ಇಂತಹ ಭೂಮಾಫಿಯಾಗಳ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಾನೂನು ಕ್ರಮ ತಕ್ಷಣ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.