ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಬೃಹತ್ ಪ್ರತಿಭಟನೆ ಸರ್ಕಾರಕ್ಕೆ ಎಚ್ಚರ ಗಂಟೆ
ವಿಜಯಪುರ: ಧಾರವಾಡದಲ್ಲಿ ಇಂದು ನಡೆದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಬೃಹತ್ ಪ್ರತಿಭಟನೆ ಸರ್ಕಾರಕ್ಕೆ ಎಚ್ಚರ ಗಂಟೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ವಿಳಂಬ ಧೋರಣೆ, ಅಧಿಸೂಚನೆ ಪ್ರಕಟಿಸದೇ ಇರುವುದು, ಫಲಿತಾಂಶ ವಿಳಂಬ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸರಿಯಾದ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ರಾಜ್ಯದಲ್ಲಿ ಯುವಕರು ಸಿಡಿದೇಳುವ ಕಾಲ ದೂರವಿಲ್ಲ.
ಪರೀಕ್ಷಾರ್ಥಿಗಳು ಕೇಳುತ್ತಿರುವ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಗಣಿಸಬೇಕು.
ರಾಜ್ಯದಲ್ಲಿ ಸುಮಾರು 2,80,000 ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24,300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಅಂದರೆ ಖಾಲಿ ಇರುವ ಶೇ 9 ರಷ್ಟು ಮಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79,694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ. ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ ಇನ್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ಭ್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದ್ದಾರೆ.