ಸಮಸಮಾಜ ಕಟ್ಟುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ-ಸಂತೋಷ ಬಂಡೆ
ಇಂಡಿ: ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ಕಾಯಕ ಶರಣರ ಜಯಂತಿ’ ಗೆ ಚಾಲನೆ ನೀಡಿ, ‘ದೈನಂದಿನ ಜೀವನದಲ್ಲಿ ಕಾಯಕದ ಮಹತ್ವ’ ಕುರಿತು ಅವರು ಮಾತನಾಡಿದರು.
ಯಾರನ್ನೂ ಕೀಳಾಗಿ ಕಾಣಬಾರದು ಎಂಬ ಬಸವಣ್ಣರ ಸಮಾನತೆಯ ತತ್ವದ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿಯವರು ತಮ್ಮ ಕಾಯಕದ ಮೂಲಕ ಶ್ರೇಷ್ಠ ಶರಣರಾಗಿದ್ದಾರೆ. ಅವರ ವಚನಗಳ ಆಶಯವನ್ನು ತಿಳಿದು ಇಂದಿನ ಪೀಳಿಗೆಯ ಮಕ್ಕಳು ಮುನ್ನಡೆಯಬೇಕಿದೆ ಎಂದು ಹೇಳಿದರು.
ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.
ಹಿರಿಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,
ಕಾಯಕವು ದೇವರ ಸಮಾನವಾದ ಶ್ರೇಷ್ಠ ಕರ್ತವ್ಯ. ಕಾಯಕದ ಮಹತ್ವವಾಗಿರುವ ಪ್ರಾಮಾಣಿಕ ದುಡಿಮೆ, ಸ್ವಾವಲಂಬನೆ, ಜಾತಿ-ಭೇದ ನಿರ್ಮೂಲನೆ ಮತ್ತು ಸಮಾನತೆಯನ್ನು ಇಂದಿನ ಮಕ್ಕಳು ಅನುಪಾಲಿಸಬೇಕು.
ಕಾಯಕವು ಬದುಕಿನ ಮಾರ್ಗವಲ್ಲ, ಬದಲಾಗಿ ಆತ್ಮಶುದ್ಧಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅರಿಯುವದಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಡಿ ಎಡ್ ಪ್ರಶಿಕ್ಷಣಾರ್ಥಿಗಳಾದ ಮುಸ್ಕಾನ ಮಂಕಣಿ, ಸಾನಿಯಾ ಪಠಾಣ, ಜುಬಿಯಾ ಬಾಗವಾನ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.