(ವಿಜಯಪುರದಲ್ಲಿ ನಡೆದ ನಂದಿ ಕೂಗು ಅಭಿಯಾನ ಹಾಗೂ
ಸಮಾವೇಶದ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯ ಅಂಶಗಳು)
ವಿಜಯಪುರ : ವಿಶ್ವ ಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ೧೧ ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡುವ ಅಂಶವನ್ನು ಪ್ರಸಕ್ತ ಬಜೆಟ್ನಲ್ಲಿ ಸೇರ್ಪಡೆ ಮಾಡಿ ಬಸವ ತತ್ವದ ಪುನರುತ್ಥಾನಕ್ಕಾಗಿ ಬಜೆಟ್ನ ಶೇ.೧೦ ರಷ್ಟು ಅನುದಾನವನ್ನು ಮೀಸಲಿರುಸುವಂತೆ ವಿಶ್ರಾಂತ ಕೃಷಿ ಅಧಿಕಾರಿ ಬಾಳಾಸಾಹೇಬ ಈಶ್ವರಗೊಂಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ತತ್ವ ಆಧಾರಿತ ಟ್ರಾö್ಯಕ್ಟರ್ ಸಂಸ್ಕೃತಿಯ ಕೃಷಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ, ಬಸವ ತತ್ವಾಧಾರಿತ ಕೃಷಿ ಮಣ್ಣಿನ ಆರೋಗ್ಯ, ಮಾನವ ಆರೋಗ್ಯ ಹೀಗೆ ಎಲ್ಲವನ್ನೂ ಕೇಂದ್ರಿಕರಿಸಿದೆ, ಹೀಗಾಗಿ ಜೋಡೆತ್ತಿನ ಕೃಷಿಯನ್ನು ಈ ಹಿಂದೆAದಿಗಿAತಲೂ ಹೆಚ್ಚು ಪರಿಣಾಮಕಾರಿಯಾಗಿ ಪ್ರೋತ್ಸಾಹಿಸಬೇಕಾದ ಅವಶ್ಯಕತೆ ಇದೆ ಎಂದರು.
ಹೊಸ ತಂತ್ರಜ್ಞಾನಗಳಿಂದ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಸಾವಯವ ಉತ್ಪನ್ನಗಳು. ಆರೋಗ್ಯ ವರ್ಧಕಗಳನ್ನು ಉತ್ಪಾದಿಸುವ ವಿವಿಧ ಯೋಜನೆಗಳನ್ನು ತರುವ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಗೊಳಿಸುವುದು ರೈತರ ಬಸವ ತತ್ವದ ಉದ್ದೇಶವಾಗಿದೆ.
ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಕೃಪೆಯಿಂದ ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯು ಸರ್ಕಾರದ ಮೂಲಕ ರೈತರ ಬಸವ ತತ್ವಕ್ಕೆ ಪೂರಕ ಯೋಜನೆಗಳನ್ನು ಜಾರಿಗೆ ತಂದು ಮುಂದಿನ ೧೦ ವರ್ಷಗಳಲ್ಲಿ ೧೦ ಪಟ್ಟು ನಂದಿ ಸಂಪತ್ತು ಹೆಚ್ಚಿಸಿ ಗ್ರಾಮಗಳನ್ನು ಸ್ವಾವಲಂಬಿಗೊಳಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.
ನಂದಿ ಸಂತತಿ ನಾಶವಾಗಿ ತಿನ್ನುವ ಅನ್ನ ವಿಷವಾಗುವ ಮುಂಚೆ ನಾವೆಲ್ಲರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. ನಂದಿ ಕೃಷಿಕರಿಗೆ ಪೂರಕವಾದ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಆರೋಗ್ಯಯುತವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಸಾಲೋಟಗಿಯಲ್ಲಿ ಜೋಡೆತ್ತುಗಳ ಸಮಾವೇಶ
ನಂದಿ ಸೇನೆಯ ಪ್ರಮುಖರಾದ ಸೋಮನಾಥ ಶಿವೂರ ಮಾತನಾಡಿ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕೃಪೆಯಿಂದ ಕೃಷಿ ಪದವೀಧರರಿಂದ ಪ್ರಾರಂಭವಾದ ನಂದಿ ಕೂಗು ಅಭಿಯಾನದ ಅಡಿಯಲ್ಲಿ ರೈತರ ಬಸವ ತತ್ವದ ಪುನರುತ್ಥಾನಕ್ಕೆ ಪೂರಕ ಯೋಜನೆ ಹಾಗೂ ಕಾನೂನು ಜಾರಿಗಾಗಿ ಹಕ್ಕೊತ್ತಾಯ ಮಾಡುವುದಕ್ಕಾಗಿ ೧೦೮ ಗ್ರಾಮಗಳ ಜೋಡೆತ್ತಿನ ರೈತರ ಐತಿಹಾಸಿಕ ಸಮಾವೇಶವು
ಇದೇ ದಿ.೧೩ ರಂದು ಬೆಳಿಗ್ಗೆ ೧೦ ಕ್ಕೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಜರುಗಲಿದೆ. ಸಮಾವೇಶದಲ್ಲಿ ವಿಶೇಷ ಎತ್ತುಗಳು ಹಾಗೂ ಬೀಜದ ಹೋರಿಗಳ ಪ್ರದರ್ಶನವಿರುತ್ತದೆ. ನಂದಿ ಹಾಗೂ ಗೋ ಉತ್ಪನ್ನಗಳ ಮಾರಾಟ ವ್ಯವಸ್ಥೆ ಇರುವುದು. ಆದ ಕಾರಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಸಿಂದಗಿಯ ಸಾರಂಗಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಬುರಣಾಪುರದ ಮಾತೋಶ್ರೀ ಯೋಗೇಶ್ವರಿ ಮಾತಾಜಿ, ಸಾಲೋಟಗಿಯ ಶ್ರೀ ಸಿದ್ದೇಶ್ವರ ಆಶ್ರಮದ ಶ್ರೀ ಸಂಗಮೇಶ್ವರ ಸ್ವಾಮೀಜಿಜಿ, ನಂದಿ ಕೂಗು ಅಭಿಯಾನದ ಮಾರ್ಗದರ್ಶಕರಾದ ಬಿಜ್ಜರಗಿಯ ಸೋಮಲಿಂಗ ಅಜ್ಜನನವರು ಸಾನಿಧ್ಯ ವಹಿಸಲಿದ್ದಾರೆ ಎಂದರು.
ನಂದಿ ಕೂಗು ಅಭಿಯಾನದ ಪ್ರಮುಖರಾದ ಸೋಮನಾಥ ಶಿವೂರ, ಶಿವರಾಜ್ ಪಾರಗೊಂಡ, ಸಂಗಮೇಶ ಕಾಮನ್ನವರ, ಅಭಿಷೇಕ ಬಿರಾದಾರ, ಬಸವರಾಜ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.