ಕಾರ್ ಸರ್ವಿಸ್ ಸೆಂಟರ್ ದಲ್ಲಿ ಅಗ್ನಿ ಅವಘಡ; ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಭೇಟಿ; ರೂ.5 ಲಕ್ಷ ಪರಿಹಾರ ಘೋಷಣೆ
ವಿಜಯಪುರ: ನಗರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಹನುಮಂತ ಕನಮಡಿ ಎಂಬುವರ ಎಚ್.ಎಂ.ಕೆ ಕಾರ್ ಸರ್ವಿಸ್ ಸೆಂಟರ್ ದಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ ಶನಿವಾರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ಮಾಳ ರವರು ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು, ರೂ.5 ಲಕ್ಷ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅವಘಡ ದಲ್ಲಿ ದುರಸ್ತಿಗಾಗಿ ಬಂದಿದ್ದ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಲಾಗಿವೆ. ಸರ್ವಿಯ ಸೆಂಟರ್ ದಲ್ಲಿದ್ದ ಲಕ್ಷಾಂತರ ಮೌಲ್ಯದ ಬಿಡಿ ಭಾಗಗಳು ಕೂಡ ಬೆಂಕಿಗಾಹುತಿ ಆಗಿವೆ ಎಂದು ತಿಳಿಸಿದ್ದಾರೆ. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮಾನವೀಯತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ಈ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೂ ಮಾತನಾಡುವುದಾಗಿ ತಿಳಿಸಿದರು.
ಅಗ್ನಿಸೂಕ್ಷ್ಮ ಮಳಿಗೆಗಳಲ್ಲಿ ಮಾಲೀಕರು/ಆಡಳಿತ ಮಂಡಳಿ ಅವಘಡ ಆಗದಂತೆ, ಒಂದು ವೇಳೆ ಆದರೂ ಅಗ್ನಿ ನಂದಿಸಲು ಉಪಕರಣವನ್ನು ಅಳವಡಿಸಿಕೊಂಡಿರಬೇಕು. ಹಾಗೆಯೇ, ವಿಮೆಯಿದ್ದರೆ ಒಳಿತು. ವರ್ಷಕ್ಕೊಮ್ಮೆ ವಿದ್ಯುತ್ ಉಪಕರಣಗಳ ಅಡಿಟ್ ಮಾಡಿ ಎಲ್ಲಿಯೂ ಸೋರಿಕೆ ಆಗದಂತೆ, ಶಾರ್ಟ್ ಸರ್ಕ್ಯೂಟ್ ಆಗದಂತೆ ನೋಡಿಕೊಳ್ಳಬೇಕು. ಸುರಕ್ಷತೆ ಹಾಗೂ ತಡೆಗಟ್ಟುವ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.