ಪ್ರಭಾವಶಾಲಿ ಅನ್ನೋದು ಜೈಲಲ್ಲಿ ನಡೆಯಲ್ಲ: ಪವಿತ್ರಗೌಡ ಮನೆ ಊಟ ವಿಚಾರದಲ್ಲಿ ಅಲೋಕ್ ಕುಮಾರ್ ಖಡಕ್ ಮಾತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಗೌಡಗೆ ಮನೆಯಿಂದ ಊಟ ಕೊಡದೇ ಇರೋದು ಸರಿಯಾದ ನಿರ್ಧಾರವೇ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಅಲೋಕ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ. ಶಿವಮೊಗ್ಗ ಜೈಲಿಗೆ ಭೇಟಿ ಕೊಟ್ಟ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೈಕೋರ್ಟ್ ಈಗಾಗಲೇ ಪವಿತ್ರಗೌಡಗೆ ಮನೆ ಊಟಕ್ಕೆ ನಿಷೇಧ ಹೇರಿರುವ ವಿಚಾರವನ್ನು ನೆನಪಿಸಿದರು. ಜೈಲಿನಲ್ಲಿ ಕೈದಿಗಳಿಗೆ ನೀಡುವ ಊಟ ಯಾವತ್ತೂ ಕಡಿಮೆಯಲ್ಲ, ಬದಲಾಗಿ ಕಾರಾಗೃಹದಲ್ಲೇ ತಯಾರಾಗುವ ಆಹಾರವನ್ನು FSILಗೆ ಪರೀಕ್ಷೆಗೆ ಕಳುಹಿಸಿ, ಸರ್ಟಿಫಿಕೇಟ್ ಪಡೆದುಕೊಂಡ ಬಳಿಕವೇ ಕೈದಿಗಳಿಗೆ ನೀಡಲಾಗುತ್ತಿದೆ ಎಂದರು. ಜೈಲಿನಲ್ಲಿ ಯಾರು ಪ್ರಭಾವಶಾಲಿ, ಯಾರು ಸಾಮಾನ್ಯ ಅನ್ನೋ ಭೇದಭಾವ ಮಾಡಲು ಸಾಧ್ಯವೇ ಇಲ್ಲ, ಎಲ್ಲರೂ ಕೈದಿಗಳೇ ಎಂದು ಅಲೋಕ್ ಕುಮಾರ್ ಹೇಳಿದರು. ಕರ್ನಾಟಕ ಪ್ರಿಜನರ್ಸ್ ಆಕ್ಟ್ 1963ರ ಸೆಕ್ಷನ್ 30 ಪ್ರಕಾರ ಕೈದಿಗಳಿಗೆ ಊಟ, ಬಟ್ಟೆ, ಪುಸ್ತಕಗಳಂತಹ ಮೂಲ ಸೌಲಭ್ಯಗಳನ್ನು ಜೈಲು ಇಲಾಖೆ ನೀಡಬೇಕು ಅನ್ನೋದೇ ನಿಯಮ, ಅದೇ ನಿಯಮದ ಅಡಿಯಲ್ಲಿ ಎಲ್ಲ ತೀರ್ಮಾನಗಳು ಆಗುತ್ತವೆ ಎಂದರು. ಈಗಾಗಲೇ ಸರ್ಟಿಫೈಡ್ ಆಗಿರುವ ಜೈಲು ಊಟವನ್ನು ನೀಡುತ್ತಿರುವಾಗ, ಒಬ್ಬರಿಗೆ ಮಾತ್ರ ಮನೆಯಿಂದ ಊಟಕ್ಕೆ ಅವಕಾಶ ಕೊಟ್ಟರೆ, ಮುಂದೆ ಸಾವಿರಾರು ಕೈದಿಗಳು ಇದೇ ಬೇಡಿಕೆ ಇಡುತ್ತಾರೆ, ಆಗ ವ್ಯವಸ್ಥೆಯೇ ಗೊಂದಲಕ್ಕೆ ಸಿಲುಕುತ್ತದೆ. ಅದಕ್ಕಾಗಿಯೇ ಪವಿತ್ರಗೌಡಗೆ ಮನೆ ಊಟ ನೀಡಲು ನಿರಾಕರಿಸಿರುವುದು ಒಳ್ಳೆಯದು, ಕಾನೂನು ಮತ್ತು ನಿಯಮದ ಪ್ರಕಾರ ತೆಗೆದುಕೊಂಡ ನಿರ್ಧಾರವೇ ಇದು ಎಂದು ಜೈಲು ಡಿಜಿ ಅಲೋಕ್ ಕುಮಾರ್ ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.