ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಾವೇ ಸಿದ್ಧಪಡಿಸಿದ ಒಂದು ನಿಮಿಷದ ಭಾಷಣವನ್ನು ಓದಿ ಸದನದಿಂದ ಹೊರನಡೆದರು.
ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ರಾಜ್ಯ ಸರ್ಕಾರಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳಿವೆ ಎಂಬ ಆಕ್ಷೇಪ ಎತ್ತಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್, ಗುರುವಾರ(ಜ.22) ಆರಂಭವಾಗಲಿ ರುವ ಜಂಟಿ ಅಧಿವೇಶನದಲ್ಲಿ ಭಾಷಣ ಓದಲು ನಿರಾಕರಿಸಿದ್ದಾರೆ. ಇದು ಸರ್ಕಾರ ಮತ್ತು ಲೋಕಭವನದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ಸುಮಾರು ಒಂದು ನಿಮಿಷದ ಭಾಷಣ ಓದಿದ ಬಳಿಕ ರಾಜ್ಯಪಾಲರು ಹೊರನಡೆದಾಗ ಕಾಂಗ್ರೆಸ್ ನಾಯಕರು ಘೇರಾವ್ ಹಾಕಲು ಪ್ರಯತ್ನ ನಡೆಸಿದ್ದಾರೆ.
ಇದರಿಂದಾಗಿ ಸದನದಲ್ಲಿ ಬಿಗುವಾದ ಸನ್ನಿವೇಶವು ನಿರ್ಮಾಣವಾಯಿತು. ಬಳಿಕ ಬಿಗಿ ಭದ್ರತೆಯಲ್ಲಿ ರಾಜ್ಯಪಾಲರನ್ನು ಸದನದಿಂದ ಹೊರಗಡೆಗೆ ಕರೆದೊಯ್ಯಲಾಯಿತು.
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಗೆಹಲೋತ್ ನಿರಾಕರಣೆರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ: ಸಿದ್ದರಾಮಯ್ಯ ಕಿಡಿ
ರಾಜ್ಯಪಾಲರ ಕ್ರಮ ಖಂಡಿಸಿದ ಸಿಎಂ ಸಿದ್ದರಾಮಯ್ಯ
ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸರ್ಕಾರದ ಭಾಷಣ ಓದದ ರಾಜ್ಯಪಾಲರ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಅಲ್ಲದೆ ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಳ್ಳುವ ಮತ್ತು ಈ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯಪಾಲರ ಈ ನಡೆಯು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಅವರು ಹೇಳಿದ್ದಾರೆ.
ಈ ನಡುವೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಅಡ್ಡಗಟ್ಟಿ ಭಾಷಣ ಮಾಡುವಂತೆ ಪಟ್ಟು ಹಿಡಿದಿರೋ ಪ್ರಸಂಗ ನಡೆದಿದೆ.
ರಾಜ್ಯಪಾಲರ ಎದುರು ನಿಂತು ನೀವು ಭಾಷಣವನ್ನು ಪೂರ್ತಿಯಾಗಿ ಓದಿ ಹೋಗಬೇಕೆಂದು ಆಗ್ರಹಿಸಿದ್ದಾರೆ. ಈ ವೇಳೆ ರಾಜ್ಯಪಾಲರ ಭದ್ರತಾ ಸಿಬ್ಬಂದಿ ಬಿ.ಕೆ.ಹರಿಪ್ರಸಾದ್ ಅವರ ಪಕ್ಕಕ್ಕೆ ಸರಿಸಿ ರಾಜ್ಯಪಾಲರಿಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಈ ವೇಳೆ ತಳ್ಳಾಟ ನೂಕಾಟ ನಡೆದಿದೆ. ಬಿ.ಕೆ.ಹರಿಪ್ರಸಾದ್ ಅವರ ಬಿಳಿ ಜುಬ್ಬಾದ ಕೆಳ ಭಾಗ ಸ್ವಲ್ಪ ಹರಿದಿದೆ. ಬಿಜೆಪಿ ಸದಸ್ಯರೇ ಹಿಂದಿನಿಂದ ತಮ್ಮ ಜುಬ್ಬಾವನ್ನು ಹರಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಮಧ್ಯೆ ರಾಜ್ಯಪಾಲರು ಸರ್ಕಾರದ ಚೌಕಟ್ಟಲ್ಲೇ ಕೆಲಸ ಮಾಡಿದ್ದು, ಒಕ್ಕೂಟ ವ್ಯವಸ್ಥೆಯ ಘನತೆ ಎತ್ತಿ ಹಿಡಿದಿದ್ದಾರೆ ಎಂದು ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.