ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ದೇಶದ ಏಕತೆ, ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸಿದೆ. ಇದರ ಫಲವಾಗಿ ಇಂದು ಭಾರತದ ಸಂವಿಧಾನವು ಜಗತ್ತಿನಾದ್ಯಂತ ಅತ್ಯಂತ ಶ್ರೇಷ್ಠ ಮತ್ತು ಬಲಿಷ್ಠ ಸಂವಿಧಾನವೆಂದು ಗುರುತಿಸಿಕೊಂಡಿದೆ ಎಂದರು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿ ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ನಮ್ಮ ಹಿರಿಯರು ತಮ್ಮ ಅಮೂಲ್ಯ ತ್ಯಾಗ ಹಾಗೂ ಬಲಿದಾನಗಳ ಮೂಲಕ ಇಂದಿನ ಭಾರತವನ್ನು ಒಂದು ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪಿಸುವುದಕ್ಕಾಗಿ ಸಂವಿಧಾನವನ್ನು ನಿರ್ಮಿಸಿದ್ದಾರೆ. ಆ ಮಹಾನ್ ಕೊಡುಗೆಯನ್ನು ಸ್ಮರಿಸುವ ದಿನವೇ ಇಂದು. ಭಾರತ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು ಎಂದರು.
ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದ ಹಿಡಿದು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದವರೆಗೆ, ಪ್ರತಿಯೊಂದು ಸರ್ಕಾರವೂ ತನ್ನದೇ ಆದ ರೀತಿಯಲ್ಲಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ವಿವಿಧ ಸವಾಲುಗಳ ನಡುವೆಯೂ ಭಾರತವನ್ನು ಮುಂದಕ್ಕೆ ಕೊಂಡೊಯ್ಯಲು ಎಲ್ಲ ಸರ್ಕಾರಗಳ ಪ್ರಯತ್ನಗಳು ಶ್ಲಾಘನೀಯವಾಗಿವೆ. ಆದ್ದರಿಂದ ನಮ್ಮ ದೇಶದ ಕಾನೂನು ಹಾಗೂ ಸಂವಿಧಾನವನ್ನು ಗೌರವಿಸಿ ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ನಮ್ಮಲ್ಲಿ ವೈಯಕ್ತಿಕವಾಗಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ದೇಶದ ಹಿತದ ವಿಚಾರ ಬಂದಾಗ ಎಲ್ಲರೂ ಒಂದಾಗಿ ನಿಲ್ಲಬೇಕು. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಸಂವಿಧಾನವೇ ನಮ್ಮ ಮಾರ್ಗದರ್ಶಕವಾಗಿದೆ.
ಕರ್ನಾಟಕ ರಾಜ್ಯಕ್ಕೂ ತನ್ನದೇ ಆದ ಸಮೃದ್ಧ ಇತಿಹಾಸವಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ, ದಲಿತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಗಳು ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿವೆ. ಅವರ ಕೊಡುಗೆಗಳು ಇಂದಿಗೂ ಸ್ಮರಣೀಯವಾಗಿವೆ.
ಹೀಗಾಗಿ, ಇಂದು ನಾವು ನಮ್ಮ ಸಂವಿಧಾನ, ಕಾನೂನು ಮತ್ತು ನಮ್ಮ ನಾಯಕರ ತ್ಯಾಗಗಳನ್ನು ನೆನಪಿಸಿಕೊಂಡು, ದೇಶದ ಪ್ರಗತಿಗಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನು ಅನುಸರಿಸುವ ಸಂಕಲ್ಪ ಮಾಡಬೇಕಾಗಿದೆ.
ಉಪವಿಭಾಗಾಧಿಕಾರಿಗಳಾ ಚಿದಾನಂದ ಗುರುಸ್ವಾಮಿ ಧ್ವಜಾರೋಹಣ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬೀಮಣ್ಣ ಕೌಲಗಿ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಪ್ರಶಾಂತ ಕಾಳೆ, ತಹೇಸಿಲ್ದಾರ ಬಿ.ಎಸ್.ಕಡಖಭಾವಿ, ಡಿವೈಎಸ್ಪಿ ಸದಾಶಿವ ಕಟ್ಟಿಮಣಿ,,ತಾಲುಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭೀಮಾಶಂಕರ ಕನ್ನೂರ, ನಗರ ಸಭೆ ಪೌರಾಯುಕ್ತರು ಶಿವಾನಂದ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಫಾತಿಮಾ ಮುಜಾವರ, ಸೇರಿದಂತೆ ಇತರರು ಇದ್ದರೂ.