ಇಂಡಿ ನಗರವು ಶಿಕ್ಷಣದ ದೃಷ್ಟಿಯಿಂದ ದಿನೇದಿನೇ ಬೆಳೆಯುತ್ತಿರುವ ತಾಲೂಕಾಗಿದೆ. ಇಂಡಿ ಶಾಸಕರ ಆಸಕ್ತಿ ಹಾಗೂ ಶಿಕ್ಷಣದ ಬಗ್ಗೆ ಕಾಳಜಿ ಹಾಗೂ ಕಳಕಳಿಯ ಪ್ರಯತ್ನ ದಿಂದ ಸರ್ಕಾರದ ಸಹಕಾರದಿಂದ ಅನೇಕ ಪದವಿ ಹಾಗೂ ವೃತ್ತಿಪರ ಕಾಲೇಜುಗಳು ಇಂಡಿಗೆ ಬಂದಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಓಡಾಟಕ್ಕಾಗಿ ಇಂಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಅವಲಂಬಿಸಿದ್ದಾರೆ.
ಆದರೆ ಇಂತಹ ಪ್ರಮುಖ ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕೊರತೆ ಗಂಭೀರ ಚಿಂತೆಯ ವಿಷಯವಾಗಿದೆ.
ಕಾಲೇಜು ಮತ್ತು ಶಾಲಾ ತರಗತಿಗಳು ಮುಗಿದ ಬಳಿಕ ಬಸ್ ಕಾಯುತ್ತಾ ಕುಳಿತಿರುವ ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತಹ ವಾತಾವರಣ ಇಲ್ಲದ ಕಾರಣ ಮೊಬೈಲ್ ಫೋನ್ಗಳ ಗೇಮ್, ರೀಲ್ಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವುದು ಸಾಮಾನ್ಯವಾಗಿದೆ.
ಇದು ಅವರ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ನಿಧಾನವಾಗಿ ವ್ಯರ್ಥಗೊಳಿಸುತ್ತಿದ್ದು, ಓದು, ಪುಸ್ತಕ ಓದುವ ಅಭ್ಯಾಸ ಹಾಗೂ ಸೃಜನಶೀಲ ಚಿಂತನೆಗೆ ದೊಡ್ಡ ಅಡ್ಡಿಯಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಒಂದು ಚಿಕ್ಕ ಗ್ರಂಥಾಲಯ, ದಿನಪತ್ರಿಕೆ ಓದುವ ಕೋಣೆ ಅಥವಾ ಜಾಗೃತಿ ಸಂದೇಶಗಳು ಇದ್ದರೆ ವಿದ್ಯಾರ್ಥಿಗಳ ಮನಸ್ಸು ಸಕಾರಾತ್ಮಕ ದಿಕ್ಕಿಗೆ ತಿರುಗಬಹುದು.
ಇದೇ ಸಮಯದಲ್ಲಿ, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸೂಕ್ತ ಆಸನಗಳಿಲ್ಲದಿರುವುದು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರಿಗೆ ತೀವ್ರ ಅಸೌಕರ್ಯ ಉಂಟುಮಾಡುತ್ತಿದೆ. ವಿಶೇಷವಾಗಿ ಮಹಿಳೆಯರಿಗಾಗಿ ಸುರಕ್ಷಿತ ಮತ್ತು ಗೌರವಯುತ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಇಂತಹ ಪರಿಸ್ಥಿತಿ ಶಿಕ್ಷಣ ಪಡೆಯಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿನಿಯರ ಮೇಲೆ ಮಾನಸಿಕ ಒತ್ತಡವನ್ನುಂಟುಮಾಡುತ್ತದೆ.
ಪೋಷಕರಿಗೆ ಇಲ್ಲಿ ಒಂದು ಮಹತ್ವದ ಮನವಿ ಮಾಡಬೇಕಾಗಿದೆ. ನಿಮ್ಮ ಮಕ್ಕಳು ಕಾಲೇಜಿನಲ್ಲಿ ಏನು ಕಲಿಯುತ್ತಿದ್ದಾರೆ ಮಾತ್ರವಲ್ಲ, ಕಾಲೇಜಿನ ಹೊರಗೆ ತಮ್ಮ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ, ಯಾರೊಂದಿಗೆ ಸ್ನೇಹ ಹೊಂದಿದ್ದಾರೆ, ಮೊಬೈಲ್ ಬಳಕೆ ಎಷ್ಟಿದೆ ಎಂಬುದರ ಮೇಲೂ ಗಮನ ಹರಿಸುವುದು ಅಗತ್ಯ. ಮಕ್ಕಳ ಮೇಲೆ ನಂಬಿಕೆ ಇರಲಿ, ಆದರೆ ಜೊತೆಗೆ ಮಾರ್ಗದರ್ಶನವೂ ಇರಬೇಕು. ಪೋಷಕರ ಎಚ್ಚರಿಕೆ ಮತ್ತು ಸಂಭಾಷಣೆ ಮಕ್ಕಳನ್ನು ತಪ್ಪು ದಾರಿಯಿಂದ ದೂರ ಇಟ್ಟು, ಸರಿಯಾದ ಗುರಿಯತ್ತ ಕರೆದೊಯ್ಯುತ್ತದೆ.
ಇನ್ನೊಂದೆಡೆ, ಇಂಡಿ ಬಸ್ ನಿಲ್ದಾಣದಲ್ಲಿ ಬಸ್ಗಳ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಸಮಯ ಸರಿಯಾಗಿ ತಿಳಿಯದಿರುವುದು ಮತ್ತು ನಿರ್ವಹಣೆಯ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ನಲ್ಲಿ ಆಸನ ಪಡೆಯಲು ತಳ್ಳಾಟ–ಗದ್ದಲಕ್ಕೆ ಒಳಗಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿ.
ಆದ್ದರಿಂದ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಇಂಡಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಸ್ನೇಹಿ ಹಾಗೂ ಜನಸ್ನೇಹಿ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕಾಗಿದೆ. ಕುಳಿತುಕೊಳ್ಳುವ ವ್ಯವಸ್ಥೆ, ಮಹಿಳೆಯರಿಗಾಗಿ ಸೂಕ್ತ ವ್ಯವಸ್ಥೆ, ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಅಥವಾ ಓದು ಕೋಣೆ, ಸ್ಪಷ್ಟ ಬಸ್ ವೇಳಾಪಟ್ಟಿ ಹಾಗೂ ಶಿಸ್ತಿನ ಬಸ್ ವ್ಯವಸ್ಥೆ ಜಾರಿಯಾದರೆ ಮಾತ್ರ ವಿದ್ಯಾರ್ಥಿಗಳ ಅಮೂಲ್ಯ ಸಮಯ ಮತ್ತು ಭವಿಷ್ಯವನ್ನು ರಕ್ಷಿಸಬಹುದು. ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭರವಸೆ; ಅವರ ಮೇಲೆ ಹೂಡಿಕೆ ಮಾಡಿದರೆ ಮಾತ್ರ ಇಂಡಿಯ ಬೆಳವಣಿಗೆ ಸಾರ್ಥಕವಾಗಲಿದೆ.