ಆದರ್ಶ ಜೀವನಕ್ಕೆ ಸನ್ಮಾರ್ಗ ತೋರಿದ ವೇಮನರು-
ಸಂತೋಷ ಬಂಡೆ
ಇಂಡಿ: ವೇಮನರು ನಮ್ಮೊಳಗಿನ ಛಲ ಮತ್ತು ಸಮಾಜದ ಅಂತರಾಳವನ್ನು ತಟ್ಟಿ ಜಾಗೃತಗೊಳಿಸಿ, ಸ್ವಾಭಿಮಾನದ ಬದುಕಿಗೆ ದಾರಿ ತೋರಿದವರು. ಸುಳ್ಳು, ಮೂಢನಂಬಿಕೆ,
ಅನ್ಯಾಯಗಳ ವಿರುದ್ಧ ನೇರವಾಗಿ ಮಾತನಾಡಿದ ಅವರ ಪ್ರತಿಯೊಂದು ನುಡಿ ನಮ್ಮ ಜೀವನಕ್ಕೆ ದಾರಿದೀಪ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರದಂದು ತಾಲೂಕಿನ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕವಿ ವೇಮನರು ತಮ್ಮ ಪದ್ಯಗಳಲ್ಲಿ ಮಾನವೀಯ ಮೌಲ್ಯಗಳು, ಆತ್ಮಗೌರವ, ಸಮಾನತೆ, ಸಮಾಜಮುಖಿ ಚಿಂತನೆ, ಪರರಿಗೆ ಸಹಾಯ ಮಾಡುವ ಸಾಮಾಜಿಕ ಕಳಕಳಿ, ಜಾತಿ, ಧರ್ಮಗಳನ್ನು ಮೀರಿ ಲೋಕ ಶಾಂತಿ ಸಾರಿ, ಆದರ್ಶ ಜೀವನಕ್ಕೆ ಸನ್ಮಾರ್ಗ ತೋರಿದ್ದಾರೆ ಎಂದು ಹೇಳಿದರು.
ವೇಮನರು ಅಧ್ಯಾತ್ಮ, ನೀತಿಶಾಸ್ತ್ರ, ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ವಚನಗಳನ್ನು ರಚಿಸುವ ಮೂಲಕ ಆಧ್ಯಾತ್ಮಿಕ ಬಾನಂಗಳದ ಧ್ರುವತಾರೆಯಾಗಿ ಮಿಂಚಿದ್ದಾರೆ ಎಂದು ಹೇಳಿದರು.
ಚಡಚಣ ಶಾಲಾ ಶಿಕ್ಷಕ ಬಸವರಾಜ ಕರಜಗಿ ಮಾತನಾಡಿ, ವೇಮನರು ಭೋಗ ಜೀವನದ ದಾಸರಾಗಿ, ವೈರಾಗ್ಯವನ್ನು ತಾಳಿ, ಇಡೀ ಮಾನವ ಸಂಕುಲಕ್ಕೆ ಬದುಕಿನ ನಶ್ವರತೆಯನ್ನು ತಿಳಿಸುತ್ತಾ, ನುಡಿಗಿಂತ ಹೆಚ್ಚು ನಡೆಗೆ ಮಹತ್ವ ನೀಡಿದ್ದರು. ಸಮ ಸಮಾಜ ಕಟ್ಟಲು ಹೋರಾಡಿದ ಬಸವಣ್ಣನವರ ಛಾಯೆ ವೇಮನರಲ್ಲಿ ಕಾಣುತ್ತೇವೆ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಬೇಗಂ ಮುಲ್ಲಾ, ಕಮಲವ್ವ ದಳವಾಯಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.